ಬಂಟ್ವಾಳ : ತೆಂಗಿನಕಾಯಿ ಕಾಯಿ ತೆಗೆಯುವಾಗ ಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ತಾರಿಪಡ್ಪು ಎಂಬಲ್ಲಿ ನಡೆದಿದೆ.ಗಣೇಶ್ (45) ಮೃತರು.
ಗಣೇಶ್ ಅವರು ತಮ್ಮ ಅಣ್ಣ ಪ್ರಕಾಶ್ ಅವರೊಂದಿಗೆ ತೆಂಗಿನ ಕಾಯಿ ಮತ್ತು ಅಡಿಕೆ ಕೊಯ್ಯುವ ಕೂಲಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ 19ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಇಬ್ಬರೂ ನರಿಕೊಂಬು ಗ್ರಾಮದ ತಾರಿಪಡ್ಪು ಪ್ರದೇಶದಲ್ಲಿರುವ ವಿಠಲ ಮೂಲ್ಯ ಅವರ ಮನೆಯ ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಯಲು ತೆರಳಿದ್ದರು. ಮಧ್ಯಾಹ್ನ ಸುಮಾರು 11 ಗಂಟೆ ಸುಮಾರಿಗೆ ಗಣೇಶ್ ಅವರು ಕಾಲಿಗೆ ಮತ್ತು ಕೈಗೆ ಹಗ್ಗವನ್ನು ಹಾಕಿಕೊಂಡು ತೆಂಗಿನ ಮರಕ್ಕೆ ಹತ್ತಿ ಸುಮಾರು 25 ಅಡಿ ಎತ್ತರಕ್ಕೆ ತೆರಳಿದ್ದ ವೇಳೆ ಕಾಲಿಗೆ ಕಟ್ಟಿದ್ದ ಹಗ್ಗ ಆಕಸ್ಮಿಕವಾಗಿ ತುಂಡಾಗಿ ಮರದ ಬುಡದ ಪಕ್ಕಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡರು.
ತಕ್ಷಣವೇ ಪ್ರಕಾಶ್ ಮತ್ತು ವಿಠಲ ಮೂಲ್ಯ ಅವರು ಗಣೇಶ್ ಅವರನ್ನು ಎಬ್ಬಿಸಿ ಆರೈಕೆ ಮಾಡಿದ್ದು, ತಲೆಗೆ ಗಂಭೀರ ಗಾಯವಾಗಿರುವುದು ಕಂಡುಬಂದಿತು. ಬಳಿಕ ಅವರನ್ನು ಚಿಕಿತ್ಸೆಗಾಗಿ ವಾಹನದಲ್ಲಿ ಬಂಟ್ವಾಳದ ಸೋಮಯಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ವೈದ್ಯರು ಪರೀಕ್ಷಿಸಿ ಮಧ್ಯಾಹ್ನ ಸುಮಾರು 12 ಗಂಟೆಗೆ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


