ಬೆಂಗಳೂರು: ಒಡಿಶಾದಲ್ಲಿ ನಾಳೆ ರಾಜ್ಯಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇರುವ ಒಡಿಶಾ ಶಾಸಕರಿಗೆ ಆಮಿಷ ಒಡ್ಡಲು ಯತ್ನಿಸಿರುವ ಘಟನೆ ನಡೆದಿದೆ.
ಒಡಿಶಾ ರಾಜ್ಯದ ಕಾಂಗ್ರೆಸ್ ಶಾಸಕರು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್ ನಲ್ಲಿ ತಂಗಿದ್ದು, ರೆಸಾರ್ಟ್ನಲ್ಲಿ ಇಂದು ಬೆಳಗ್ಗೆ ಓರ್ವ ಕಾಂಗ್ರೆಸ್ ಶಾಸಕನನ್ನು ನಾಲ್ವರು ಅಪರಿಚಿತ ವ್ಯಕ್ತಿಗಳು ಭೇಟಿಯಾಗಿದ್ದರು ಎಂದು ಹೇಳಲಾಗಿದೆ.
ಕರ್ನಾಟಕ ಮೂಲದ ವ್ಯಕ್ತಿ ಜೊತೆ ರೆಸಾರ್ಟ್ಗೆ ಬಂದಿದ್ದ ನಾಲ್ವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಗರು ಪತ್ತೆ ಹಚ್ಚಿ ಹಿಡಿದಿದ್ದು, ಅವರ ಬಳಿ ಖಾಲಿ ಚೆಕ್ ಗಳು ಕೂಡಾ ಪತ್ತೆಯಾಗಿವೆ.
ಘಟನೆ ಬಳಿಕ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಒಡಿಶಾದ ಕಾಂಗ್ರೆಸ್ ಶಾಸಕರು ಭೇಟಿ ಮಾಡಿದ್ದು, ಬಿಡದಿಯಿಂದ ದೇವನಹಳ್ಳಿ ಬಳಿಯ ರೆಸಾರ್ಟ್ ಗೆ ವಾಸ್ತವ್ಯ ಬದಲಿಸಿದ್ದಾರೆ.
ನಾಳೆ ಬೆಳಗ್ಗೆ ಬೆಂಗಳೂರಿನಿಂದ ನೇರವಾಗಿ ಭುವನೇಶ್ವರಕ್ಕೆ ವಿಮಾನದ ಮೂಲಕ ತೆರಳಲಿರುವ ಕಾಂಗ್ರೆಸ್ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.


