ಮಂಗಳೂರು: ಲೂಡ ಕಾಯಿನ್ ನುಂಗಿ 8 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಎಂಬಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕ (8) ಮೃತ ಬಾಲಕಿ.
ಮೃತ ತನುಷ್ಕ ಅವರ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು ಉದ್ಯೋಗಕ್ಕೆ ತೆರಳಲು ಹತ್ತಿರವಾಗಲು ಕುಟುಂಬ ಸಮೇತ ಕೊಲ್ಯದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಶಾಲೆಗೆ ರಜೆ ಇದ್ದ ಕಾರಣ ರಾಜೇಶ್ವರಿ ಅವರ ಎರಡನೇ ಮಗಳು ತನುಷ್ಕ ತನ್ನ ಅಣ್ಣ ಮತ್ತು ತಂಗಿಯ ಜತೆ ಲೂಡೊ ಆಟದಲ್ಲಿ ತೊಡಗಿದ್ದಳಂತೆ.
ಈ ವೇಳೆ ತನುಷ್ಕಾ ಲೂಡೊ ಆಟದಲ್ಲಿ ಬಳಸಲಾಗುವ ಹೊಸ ಶಂಕು ಆಕಾರದ ಕಾಯ್ನ್ ಅನ್ನು ನುಂಗಿ ಏಕಾಏಕಿ ಉಸಿರು ಗಟ್ಟಿದ ಸ್ಥಿತಿಯಲ್ಲಿ ಗಂಭೀರಗೊಂಡಿದ್ದು ಗಾಬರಿಗೊಂಡ ಆಕೆಯ ತಾಯಿ ನೆರೆಹೊರೆಯವರ ಸಹಾಯದಿಂದ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಆಕೆಯನ್ನ ಚಿಕಿತ್ಸೆಗೆ ಒಯ್ದಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ತನುಷ್ಕ ಮೃತ ಪಟ್ಟಿರುವುದಾಗಿ ಘೋಷಿಸಿದ್ದಾರೆ.
ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆಯ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕಾಯ್ನ್ ಲಭಿಸಿದೆ. ತನುಷ್ಕ ತೊಕ್ಕೊಟ್ಟುವಿನ ಸಂತ ಸೆಬಾಸ್ಟಿಯನ್ ಹೈಸ್ಕೂಲ್ ನಲ್ಲಿ ಎರಡನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಳು.


