Thursday, June 4, 2026
Homeಕರಾವಳಿ'ಮಲೆಯಡ್ಕ ಉಳಿಸಿ' ಹೋರಾಟ ರಾಷ್ಟ್ರೀಯ ಬುಡಕಟ್ಟು ಆಯೋಗದಿಂದ ಅಧಿಕಾರಿಗಳಿಗೆ ನೋಟಿಸ್ ಜಾರಿ

‘ಮಲೆಯಡ್ಕ ಉಳಿಸಿ’ ಹೋರಾಟ ರಾಷ್ಟ್ರೀಯ ಬುಡಕಟ್ಟು ಆಯೋಗದಿಂದ ಅಧಿಕಾರಿಗಳಿಗೆ ನೋಟಿಸ್ ಜಾರಿ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಮಲೆಯಡ್ಕ ಎಂಬಲ್ಲಿ ಅಕ್ರಮವಾಗಿ ನಿಯಮಗಳನ್ನು ಗಾಳಿಗೆ ತೂರಿ ಮುಗ್ರೋಡಿ ಕನ್ ಸ್ಟ್ರಕ್ಷನ್ ನಡೆಸಿದ ಎನ್ನಲಾದ ದೌರ್ಜನ್ಯಗಳ ಕುರಿತಾಗಿ ಇದೀಗ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಎಂಟ್ರಿ ತೀವ್ರ ಕುತೂಹಲ ಮೂಡಿಸಿದೆ.

2008 ರಿಂದ ಪ್ರಾರಂಭಗೊಂಡು ಹಾಟ್ ಮಿಕ್ಸಿಂಗ್ ಮತ್ತು ಕಾಂಕ್ರೀಟ್ ಮಿಕ್ಸಿಂಗ್ ನಲ್ಲಿ ನಿರತವಾಗಿದ್ದ ಮುಗ್ರೋಡಿ ಕನ್ಸ್ ಸ್ಟ್ರಕ್ಷನ್ ಕಳೆದ ಕೆಲವರ್ಷದಿಂದ ಸೂಕ್ತ ಚಿಮಿಣಿ ಅಳವಡಿಸದೆ, ಡಸ್ಟ್ ನಿಯಂತ್ರಿಸದೆ ಅಹೋರಾತ್ರಿ ಹಾಟ್ ಮಿಕ್ಸಿಂಗ್ ನಲ್ಲಿ ತೊಡಗಿತ್ತು. ಇದರಿಂದ ಬಿಡುಗಡೆಗೊಂಡ ರಾಸಾಯನಿಕ ಕಲ್ಮಷಗಳು ಉಜಿರೆ ಮತ್ತು ನಡ ಗ್ರಾಮಗಳ ನಿವಾಸಿಗಳಿಗೆ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡಿದ್ದವು‌. ಈ ಹಿನ್ನಲೆಯಲ್ಲಿ ಹೋರಾಟಕ್ಕಿಳಿದ ಮಲೆಯಡ್ಕ, ಉಜಿರೆ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ವೈದ್ಯಕೀಯ ವರದಿ, ಜಿಪಿಎಸ್ ಫೋಟೋ, ಜನಪ್ರತಿನಿಧಿಗಳ ಬಳಿ ಅಹವಾಲು ಮತ್ತು ಸರಕಾರದ ನಾನಾ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತಾದರೂ ಪರಿಣಾಮ ಮಾತ್ರ ಶೂನ್ಯವೇ ಸುತ್ತುತ್ತಿತ್ತು. ಈ ವಿಷಯ ಬೆಳ್ತಂಗಡಿ ತಾಲೂಕು ಮತ್ತು ರಾಜ್ಯ ರಾಜ್ಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿ ಪತ್ರಿಕೆ, ದೃಶ್ಯ ಮಾದ್ಯಮಗಳಲ್ಲಿ ವರದಿಯಾಗಿತ್ತು.

ಕರ್ನಾಟಕ ಉಚ್ಚನ್ಯಾಯಾಲಯ ಪ್ರಕರಣ ಆಲಿಸಿ ಜಿಲ್ಲಾಧಿಕಾರಿ, ನಡ ಪಂಚಾಯತ್ ಪಿಡಿಓ, ಮಾಲಿನ್ಯನಿಯಂತ್ರಣ ಮಂಡಳಿ, ತಹಶೀಲ್ದಾರ್ ಬೆಳ್ತಂಗಡಿ, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ, ಮತ್ತು ಮುಗ್ರೋಡಿ ಕನ್ಸ್ ಸ್ರಕ್ಷನ್ ಸಂಸ್ಥೆ ಮೊದಲಾದವರಿಗೆ ನೋಟೀಸ್ ಜಾರಿ ಮಾಡಿತ್ತು. ನೋಟೀಸ್ ನಂತರವೂ ನಿಯಮಾವಳಿಗಳ ಉಲ್ಲಂಘನೆ ಎಗ್ಗಿಲ್ಲದೆ ಮುಂದುವರೆದ ಪರಿಣಾಮ ಪರಿಶಿಷ್ಟ ಪಂಗಡ ನಿವಾಸಿಗಳು ಬೀದಿಗಿಳಿದು ತಮ್ಮ ಸಾಂಪ್ರದಾಯಿಕ ಪರಿಕರ ‘ಗುಮ್ಮಟೆ ಚಳುವಳಿ’ ನಡೆಸಿ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದರು.

ಇದು ಮಾತ್ರವಲ್ಲದೆ ತಹಶೀಲ್ದಾರರು, ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು, ಮತ್ತು ವಿವಿಧ ಇಲಾಖೆಗಳ ಮುಂದೆ ‘ಗುಮ್ಮಟೆ ಚಳುವಳಿ’ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಇದೀಗ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಪ್ರಕರಣದಲ್ಲಿ ಮದ್ಯಪ್ರವೇಶಿಸಿ ಜಿಲ್ಲಾಧಿಕಾರಿ ಮತ್ತು ಅರಣ್ಯ ಆಯುಕ್ತರಿಗೆ ನೋಟೀಸ್ ಜಾರಿಗೊಳಿಸಿದ್ದು ಪ್ರಕರಣದ ಕುರಿತಾದ ವಿಸ್ಕೃತ ವರದಿ ಕೇಳಿದೆ.

ಆಯೋಗವು ಭಾರತೀಯ ಸಂವಿಧಾನದ ಕಲಂ 338A ಅಡಿಯಲ್ಲಿ ನೀಡಿರುವ ಅಧಿಕಾರದಂತೆ ಈ ವಿಷಯವನ್ನು ವಿಚಾರಿಸಲು ನಿರ್ಧರಿಸಿದ್ದುಈ ಸಂಬಂಧ ಸಾರ್ವಜನಿಕರು, ಪರಿಶಿಷ್ಟ ಪಂಗಡ ನಿವಾಸಿಗಳು ನೀಡಿರುವ ದೂರಿನನ್ವಯ ಕೈಗೊಂಡಿರುವ ಕ್ರಮಗಳ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ನೋಟಿಸ್ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ.

ನಿಗದಿತ ಅವಧಿಯಲ್ಲಿ ಉತ್ತರ ಸಿಗದಿದ್ದಲ್ಲಿ, ಭಾರತೀಯ ಸಂವಿಧಾನದ ಕಲಂ 338A ಉಪಖಂಡ (8) ಅಡಿಯಲ್ಲಿ ನಾಗರಿಕ ನ್ಯಾಯಾಲಯಕ್ಕೆ ನೀಡಿರುವ ಅಧಿಕಾರಗಳನ್ನು ಬಳಸಿ ಸಮನ್ಸ್ ನೀಡುವ ಎಚ್ಚರಿಕೆಯನ್ನೂ ಆಯೋಗ ನೀಡಿದೆ.ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ನಿರ್ದೇಶಕ ಡಾ. ಪಿ ಕಲ್ಯಾಣರೆಡ್ಡಿ ವರದಿ ಕೇಳಿ ನೋಟೀಸ್ ಜಾರಿಗೊಳಿಸಿದ್ದಾರೆ.

- Advertisement -

Latest News

error: Content is protected !!