Friday, June 5, 2026
Homeತಾಜಾ ಸುದ್ದಿತಿರುಪತಿ ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ ಬಾತ್ ರೂಂ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬಳಸುತ್ತಿದ್ದರು; ಆಂಧ್ರಪ್ರದೇಶದ...

ತಿರುಪತಿ ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ ಬಾತ್ ರೂಂ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬಳಸುತ್ತಿದ್ದರು; ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸ್ಫೋಟಕ ಹೇಳಿಕೆ

- Advertisement -
- Advertisement -

ಆಂಧ್ರಪ್ರದೇಶ:ತಿರುಪತಿ ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ ಬಾತ್ ರೂಂ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬಳಸುತ್ತಿದ್ದರು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸ್ಫೋಟಕ ಹೇಳಿಕೆ  ನೀಡಿದ್ದಾರೆ.

ಕರ್ನೂಲ್ ಜಿಲ್ಲೆಯ ಕಲುಗೊಟ್ಲಾ ಗ್ರಾಮದಲ್ಲಿ ನಡೆದ ಗ್ರಾಮಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರ ಲಡ್ಡುಗಳಲ್ಲಿ ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್‌ಗಳಿಂದ ತಯಾರಿಸಿದ ತುಪ್ಪವನ್ನು ಬಳಸಿದ್ದಾರೆ. ಆ ಮೂಲಕ ಪವಿತ್ರವಾದ ತಿರುಮಲ ದೇವಸ್ಥಾನದ ಪ್ರಸಾದದ ಪಾವಿತ್ರ್ಯತೆ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿಯ ಘನತೆಯನ್ನು ಹಾಳುಮಾಡಿದ್ದಾರೆ. ಕೇವಲ ತಿರುಪತಿ ಮಾತ್ರವಲ್ಲದೆ, ಪ್ರಸಿದ್ಧ ಶ್ರೀಶೈಲಂ ದೇವಸ್ಥಾನಕ್ಕೂ ಇಂತಹದ್ದೇ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿತ್ತು ಎಂದು ಹೇಳುವ ಮೂಲಕ ಆತಂಕ ಮೂಡಿಸಿದ್ದಾರೆ.

‘ಸುಮಾರು ಐದು ವರ್ಷಗಳ ಕಾಲ, ಹಿಂದಿನ ಸರ್ಕಾರದ ಆಡಳಿತದಲ್ಲಿ ರಾಸಾಯನಿಕ ಮಿಶ್ರಿತ ತುಪ್ಪವನ್ನೇ ಲಡ್ಡು ತಯಾರಿಸಲು ಬಳಸಲಾಗಿತ್ತು. ತುಪ್ಪದಲ್ಲಿ ಎರಡು ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಒಂದು ಸಸ್ಯಜನ್ಯ ಮೂಲದ್ದು, ಇದು ದುಬಾರಿಯಿರುತ್ತದೆ. ಆದರೆ ಪ್ರಾಣಿಗಳ ಕೊಬ್ಬು (Animal Fat) ಅಗ್ಗವಾಗಿ ಸಿಗುತ್ತದೆ. ಹಣ ಉಳಿಸುವ ದುರಾಸೆಗೆ ಬಿದ್ದು ದೇವರ ಪ್ರಸಾದವನ್ನೂ ಬಿಡದೆ ಅಪಚಾರ ಎಸಗಿದ್ದಾರೆ. ಇದಕ್ಕೆ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ವರದಿಯೇ ಸಾಕ್ಷಿಯಾಗಿದೆ. ಈ ವರದಿಯ ಪ್ರಕಾರ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವುದು ದೃಢಪಟ್ಟಿದೆ ಎಂದಿದ್ದಾರೆ.

ವೈಎಸ್‌ಆರ್‌ಸಿಪಿ ನಾಯಕರು ಸಿಬಿಐ ನೇತೃತ್ವದ ವಿಶೇಷ ತನಿಖಾ ದಳ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ನಾಯ್ಡು, ‘ಜಗನ್ ಅವರ ಚಿಕ್ಕಪ್ಪ ಮತ್ತು ಟಿಟಿಡಿಯ ಮಾಜಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರೇ ಈ ಹಿಂದೆ ಕಲಬೆರಕೆ ನಡೆದಿರುವುದನ್ನು ಒಪ್ಪಿಕೊಂಡಿದ್ದರು. ಈಗ ಎಸ್‌ಐಟಿ ವರದಿಯ ನೆಪ ಹೇಳಿ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ಆದರೆ, ನನ್ನ ಸರ್ಕಾರ ಈ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ. ಈಗ ತಯಾರಾಗುತ್ತಿರುವ ಲಡ್ಡುಗಳಿಗೂ ಮತ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ತಯಾರಾಗುತ್ತಿದ್ದ ಲಡ್ಡುಗಳಿಗೂ ಸಾಕಷ್ಟು ವ್ಯತ್ಯಾಸವಿದೆ’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಾಯ್ಡು, ‘ತುಪ್ಪದ ಕಲಬೆರಕೆಯು ದೇವರ ವಿರುದ್ಧ ಮಾಡಿದ ಮಹಾಪಾಪ. ಈ ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ನಾನು ಸುಮ್ಮನೆ ಬಿಡುವುದಿಲ್ಲ. ಎಸ್‌ಐಟಿ ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಏಕಸದಸ್ಯ ಸಮಿತಿಯನ್ನು ರಚಿಸಲಾಗುವುದು’ ಎಂದು ಘೋಷಿಸಿದ್ದರು. 2022ರಲ್ಲೇ ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CFTRI) ನೀಡಿದ ವರದಿಯಲ್ಲಿ ಕಲಬೆರಕೆ ಸ್ಪಷ್ಟವಾಗಿ ಉಲ್ಲೇಖವಾಗಿದ್ದರೂ, ಹಿಂದಿನ ಸರ್ಕಾರ ಅದನ್ನು ಮುಂದುವರಿಸಿಕೊಂಡು ಹೋಗಿತ್ತು ಎಂದು ಆರೋಪಿಸಿದ್ದಾರೆ.

- Advertisement -

Latest News

error: Content is protected !!