
ಉಡುಪಿ : ಪಾರ್ಕ್ ಕಟ್ಟಡದಲ್ಲಿ ನಡೆದಿದ್ದ ತಾಮ್ರದ ಹೊದಿಕೆ ಕಳವು ಪ್ರಕರಣವನ್ನು ಜ.10 ರಂದು ಭೇದಿಸಿರುವ ಕಾರ್ಕಳ ಪೊಲೀಸರು ಇಬ್ಬರು ಕುಖ್ಯಾತ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನ ತಲಪಾಡಿ ಕಳವಾರು ನಿವಾಸಿ ಆರೀಫ್ ಅಲಿಯಾಸ್ ಮುನ್ನ (37) ಮತ್ತು ಕಾವೂರು ನಿವಾಸಿ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಬಲೆ ಬಿಸಲಾಗಿದೆ.

ಬಂಧಿತ ಆರೋಪಿಗಳು
ಕಾರ್ಕಳದ ಥೀಮ್ ಪಾರ್ಕ್ ಕಟ್ಟಡದ ಮುಖ್ಯ ಬಾಗಿಲನ್ನು ಜ.3 ರಂದು ಮೀಟಿ ಒಳನುಗ್ಗಿದ್ದ ಕಳ್ಳರು ಮೇಲ್ಪಾವಣಿಗೆ ಅಳವಡಿಸಲಾಗಿದ್ದ ತಾಮ್ರದ ಹೊದಿಕೆಯನ್ನು ಕಳವು ಮಾಡಿದ್ದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ್ ಅವರು ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.
ವಿಶೇಷ ತಂಡವು ಉಡುಪಿ, ದಕ್ಷಿಣ ಕನ್ನಡ ಮತ್ತು ಮಂಗಳೂರು ನಗರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಅವರಿಂದ ಕಳವು ಮಾಡಲಾದ 45,000 ರೂ. ಮೌಲ್ಯದ 51 ಕೆ.ಜಿ. ತಾಮ್ರದ ಶೀಟ್, 2 ಸೀಲಿಂಗ್ ಫ್ಯಾನ್ ಹಾಗೂ ಕೃತ್ಯಕ್ಕೆ ಬಳಸಿದ ಅಪೆ ಗೂಡ್ಸ್ ರಿಕ್ಷಾ ಮತ್ತು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 2,18,200 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿ ಆರೀಫ್ ಮೇಲೆ ಪಡುಬಿದ್ರೆ, ಉಡುಪಿ ನಗರ, ಬ್ರಹ್ಮಾವರ, ಕಾರ್ಕಳ ಗ್ರಾಮಾಂತರ, ಮೂಲ್ಕಿ ಮತ್ತು ಮೂಡುಬಿದ್ರೆ ಠಾಣೆಗಳಲ್ಲಿ 9 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಅಬ್ದುಲ್ ಹಮೀದ್ ಮೇಲೆ ಬಜಪೆ ಮತ್ತು ಮೂಡುಬಿದಿರೆ ಠಾಣೆಗಳಲ್ಲಿ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಕಳ ನಗರ ಠಾಣೆ ನಿರೀಕ್ಷಕ ಮಂಜಪ್ಪ ಡಿ.ಆರ್, ಪಿಎಸ್‌ಐಗಳಾದ ಮುರಳಿಧರ ನಾಯ್ಕ, ಶಿವಕುಮಾರ್ ಎಸ್.ಆರ್, ಪ್ರಸನ್ನ ಕುಮಾರ್ ಎಂ.ಎಸ್, ಸುಂದರ್ ಹಾಗೂ ಸಿಬ್ಬಂದಿ ರಂಜಿತ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ, ಗೋಪಾಲಕೃಷ್ಣ, ಚಂದ್ರಶೇಖರ್, ಸತೀಶ್, ಪ್ರದೀಪ್, ಶಿವಾನಂದ, ಲೋಕೇಶ್, ಮಹಾತೇಶ, ಸಂತೋಷ್ ಗೋಣಿಯಪ್ಪನವರ್, ಶ್ರೀನಿವಾಸ್, ಆನಂದ್, ಸಂತೋಷ್, ಅರ್ಚನಾ, ಅಶೋಕ್ ಕುಮಾರ್, ಪ್ರಸಾದ್ ಹಾಗೂ ಜಿಲ್ಲಾ ಆರ್.ಡಿ.ಸೆಲ್‌ನ ದಿನೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.


