ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕರ್ನಾಟಕ ರಾಜ್ಯದಲ್ಲಿ ಗ್ರಾಮಾಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು. ಹೆಗ್ಗಡೆಯವರ ಜನ್ಮ ದಿನವಾದ ನ 25 ರಂದು ಧರ್ಮಸ್ಥಳ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎಪಿಜೆ ಅಬ್ದುಲ್ ಕಲಾಂರವರ ಮೊಮ್ಮಗ, ಡಾ. ಎಪಿಜೆ ಅಬ್ದುಲ್ ಕಲಾಂ ಪ್ರತಿಷ್ಠಾನದ ಸಹಸ್ಥಾಪಕರು ಮತ್ತು ವ್ಯವಸ್ಥಾಪಕ ಟ್ರಸ್ಟಿಗಳಾದ ಎಪಿಜೆಎಂಜೆ ಶೇಖ್ ಸಲೀಂ ರವರು ಅಬ್ದುಲ್ ಕಲಾಂ ಮತ್ತು ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಚಿಂತನೆಗಳು ಒಂದೇ ದಾರಿಯಲ್ಲಿ ಸಾಗಿದ್ದು, ಈ ಸಂಬಂಧವನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಅಬ್ದುಲ್ ಕಲಾಂ ಫೌಂಡೇಶನ್ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಮುಂದಿನ ದಿನಗಳಲ್ಲಿ ಉತ್ತಮ ಸಂಬಂಧವನ್ನು ಬೆಸೆಯಲಿದೆ. ಹಾಗೆಯೇ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಅಬ್ದುಲ್ ಕಲಾಂ ಪ್ರತಿಷ್ಠಾನದ ಸಂಗ್ರಹಾಲಯದಿಂದ ಅಬ್ದುಲ್ ಕಲಾಂರವರು ಬಳಸುತ್ತಿದ್ದ ಅಮೂಲ್ಯ ವಸ್ತುವನ್ನು ಕೊಡುಗೆಯಾಗಿ ನೀಡುವುದಾಗಿ ತಿಳಿಸಿದರು.

ಮರ್ಸಿಡಿಸ್ ಬೆಂಝ್ ಕಂಪನಿಯ ಪ್ರಧಾನ ವ್ಯವಸ್ಥಾಪಕರಾದ ಸಂಜಯ್ ಕೊಚರ್ ಮಾತನಾಡಿ ಶುಭ ಹಾರೈಸಿದರು. ಉಡುಪಿಯ ಮುಖ್ಯ ಅಂಚೆ ಅಧಿಕ್ಷಕರಾದ ರಮೇಶ್ ಪ್ರಭುರವರು ಭಾರತೀಯ ಅಂಚೆ ಇಲಾಖೆ ವತಿಯಿಂದ ಹೊರತಂದ ಶ್ರೀ ಹೆಗ್ಗಡೆಯವರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಭಾರತೀಯ ಜೀವ ವಿಮಾ ನಿಗಮದ ದಕ್ಷಿಣ ವಲಯದ ಹಿರಿಯ ವಲಯಾಧಿಕಾರಿ ಪುನೀತ್ ಕುಮಾರ್ ಭಾರತೀಯ ಜೀವವಿಮಾ ನಿಗಮವು ಕಳೆದ 17 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಜನರ ಆರ್ಥಿಕ ಸ್ವಾವಲಂಬನೆಗಾಗಿ ಆರೋಗ್ಯ, ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಲ್ಲಿ ಉತ್ತಮ ಸೇವೆ ನೀಡುತ್ತಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಜೀವವಿಮಾ ಕಂಪೆನಿ ಯಿಂದಾಗಿ ಸಾರ್ವಜನಿಕರು ಇಂದು ಜಾಗೃತರಾಗಿದ್ದು, ತಾವಾಗಿಯೆ ವಿಮೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಸಾಲಗಾರರಿಗೂ ವಿಮೆ ಮಾಡಿ ಭದ್ರತೆ ನೀಡುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿದರು. ಡಾ.ಹೆಗ್ಗಡೆಯವರನ್ನು ಎಲ್ಐಸಿ, ಭಾರತೀಯ ಅಂಚೆ ಇಲಾಖೆ, ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕ್ಷೇಮವನದ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಶ್ರದ್ಧಾ ಅಮಿತ್, ಯೋಜನೆಯ ಟ್ರಸ್ಟಿಗಳಾದ ಉದಯ ಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್., ಪುತ್ತೂರು ಅಂಚೆ ಅಧೀಕ್ಷಕರಾದ ಕೆ. ರವೀಂದ್ರ ನಾಯಕ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು ಎಲ್ಐಸಿಯ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್. ಭಟ್ ಸ್ವಾಗತಿಸಿದರು. ಭಾರತೀಯ ಜೀವ ವಿಮಾ ನಿಗಮ ಉಡುಪಿ ವಿಭಾಗದ ಮೈಕ್ರೋ ಇನ್ಶುರೆನ್ಸ್ ಮೆನೆಜರ್ ದಿನೇಶ್ ಪ್ರಭು ಧನ್ಯವಾದವಿತ್ತರು. ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೆಜಸ್ ನಿರೂಪಿಸಿದರು.


