ಪುತ್ತೂರು; ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಪೊಯೊಳೆ ಎಂಬಲ್ಲಿ ನಡೆದಿದೆ. ಇಲ್ಲಿನ ಸುಮತಿ ಅವರ ಪುತ್ರಿ ನೀತಾ(22) ಆತ್ಮಹತ್ಯೆ ಮಾಡಿಕೊಂಡವರು. ಕುರಿತು ಮೃತರ ಅಕ್ಕ ಗೀತಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
‘ತಂದೆ ಗುಡ್ಡಪ್ಪ ರೈಯವರು ಸುಮಾರು 20 ವರ್ಷಗಳ ಹಿಂದೆ ಕೌಟುಂಬಿಕ ಕಲಹದ ಕಾರಣದಿಂದ ದೂರವಿದ್ದುದರಿಂದ ಮನೆಯಲ್ಲಿ ತಾಯಿ ಮತ್ತು ಅಕ್ಕ ತಂಗಿ ಮಾತ್ರ ಇದ್ದಾರೆ. ನ.23ರಂದು ಬೆಳಿಗ್ಗೆ ತಾನು ಕೆಲಸದ ನಿಮಿತ್ತ ಮತ್ತು ತಂಗಿಗೆ ಔಷಧಿಯನ್ನು ತರಲೆಂದು ಮಂಗಳೂರಿಗೆ ಹೊರಟು ಮನೆಯ ಎದುರು ಬಾಗಿಲಿನ ಚಿಲಕ ಹಾಕಿ ಬೀಗ ಹಾಕಿ ಹೋಗಿದ್ದೆ. ಈ ವೇಳೆ ತಂಗಿ ನೀತಾ ಮನೆಗೆ ಒಳಗಿನಿಂದ ಹಿಂಬಾಗಿಲಿನ ಚಿಲಕವನ್ನು ಹಾಕಿ ಬಂದ್ ಮಾಡಿಕೊಂಡಿದ್ದು ಕರೆದರೂ ಬಾಗಿಲು ತೆಗೆಯುತ್ತಿಲ್ಲ ಎಂದು ತಾಯಿ ಕರೆ ಮಾಡಿ ತಿಳಿಸಿದ್ದಾರೆ. ನಾನು ಸಂಜೆ 6.30 ಗಂಟೆಯ ಸಮಯಕ್ಕೆ ಮನೆಗೆ ಬಂದು ಮನೆಯ ಎದುರು ಬಾಗಿಲಿನ ಬೀಗ ಹಾಗೂ ಚಿಲಕವನ್ನು ತೆಗೆದು ಒಳಪ್ರವೇಶಿಸಿ, ನೀತಾ ಮಲಗುವ ಕೋಣೆಗೆ ಹೋಗಿ ನೋಡಿದಾಗ ಆಕೆ ಶಾಲಿನ ಒಂದು ತುದಿಯನ್ನು ಕಿಟಕಿಯ ಸರಳಿಗೆ ಕಟ್ಟಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಳು.. ಮೃತ ನೀತಾಳು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು 2016ರ ನಂತರ ಆಕೆಗೆ ತಲೆನೋವು ಆರಂಭವಾಗಿ ಚಿಕಿತ್ಸೆ ಮಾಡಿದರು 2020ರ ನಂತರ ಕುತ್ತಿಗೆ, ಬೆನ್ನುಹುರಿ ಮತ್ತು ತಲೆಯಲ್ಲಿ ನರ ದೋಷ ಉಂಟಾದ ಕಾರಣ ಕೆಎಂಸಿ ಮಂಗಳೂರು, ಎಜೆ ಆಸ್ಪತ್ರೆ ಮಂಗಳೂರಿನಲ್ಲಿ ಚಿಕಿತ್ಸೆ ಮಾಡಿದ್ದು ಪ್ರಸ್ತುತ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಮತ್ತು ಎಸ್‌ಡಿಎಂ ಆಯುರ್ವೇದಿಕ್ ಆಸ್ಪತ್ರೆ ಉದ್ಯಾವರದಲ್ಲಿ ಸುಮಾರು 9 ತಿಂಗಳಿನಿಂದ ಚಿಕಿತ್ಸೆ ಕೊಡಿಸುತ್ತಿದ್ದು ಬಳಿಕ ಸ್ವಲ್ಪ ಚೇತರಿಕೆ ಆಗಿ ಮನೆಯ ಆಸುಪಾಸಿನಲ್ಲಿ ನಡೆದಾಡುತ್ತಿದ್ದಳು.ತಂದೆ ತಾಯಿ ಸರಿಯಾಗಿ ನೋಡದೇ, ಆರೈಕೆ ಮಾಡದೇ, ಔಷಧಿ ನೀಡದೇ ಇದ್ದುದರಿಂದ ಹಾಗೂ ಆಕೆಯ ಕಾಯಿಲೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಪೆ ಹೊಂದಿ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಅವರು ತಿಳಿಸಿದ್ದಾರೆ..


