ಕಡಬ: ಕೆಎಂಎಫ್ ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಡಬ ತಾಲೂಕು ಕೊಯಿಲ ಗ್ರಾಮದ ಅಹನ್ಯಾ ನಿವಾಸದ ನಿವೃತ್ತ ಸೈನಿಕ ಮಧು ಬಿ.ಬಿ ಎಂಬರಿಗೆ ಮೊದಲಿನಿಂದಲೂ ಪರಿಚಯವಿದ್ದ ಸಾಮಾಜಿಕ ಕಾರ್ಯಕರ್ತೆಯಾದ ಬೆಂಗಳೂರಿನ ವನಿತಾ ಶಿವನಂಜಪ್ಪ ಎಂಬವರ ಬಳಿ ತಮ್ಮ ಪತ್ನಿಗೆ ಉದ್ಯೋಗದ ಬಗ್ಗೆ ಮಾತನಾಡಿದಾಗ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದಿನಮ್ಮಗಟ್ಟನ ಹಳ್ಳಿ ಗ್ರಾಮದ ನಾಗಾರ್ಜುನ ಡಿ ಜಿ ಯಾನೆ ಅರ್ಜುನ ಗೌಡ ಎಂಬವರನ್ನು ಪರಿಚಯಿಸಿದ್ದರು.
ಈ ಮೊದಲೇ ತುಮಕೂರಿನಲ್ಲಿರುವ KMF ನಲ್ಲಿ ವಿಸ್ತರಣಾ ಅಧಿಕಾರಿ ಖಾಲಿ ಇದ್ದ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಕಾರಣ ಈ ಬಗ್ಗೆ ನಾಗಾರ್ಜುನ ರವರಲ್ಲಿ ಮಾತನಾಡಿದಾಗ ರೂ 8 ಲಕ್ಷ ನೀಡಿದಲ್ಲಿ ನಾನು KMF ನಲ್ಲಿ ಖಾಲಿ ಇದ್ದ ಹುದ್ದೆಯನ್ನು ನಿಮಗೆ ಕೊಡಿಸುವುದಾಗಿ ತಿಳಿಸಿದ್ದ . ಹಣವನ್ನು ರೂ 5 ಲಕ್ಷ ಮೊದಲು ಹಾಗೂ ಹುದ್ದೆ ದೊರಕಿದ ನಂತರ 3 ಲಕ್ಷ ನೀಡಬೇಕೆಂದು ತಿಳಿಸಿದ್ದ ಕಾರಣ 2023 ರ ಜುಲೈ 11 ರಂದು 2 ಲಕ್ಷ ರೂ ನೀಡಿದ್ದರು. ನಂತರ ಆಗಸ್ಟ್ 22 ರಂದು ಮತ್ತೆ 3 ಲಕ್ಷ ರೂ ಹಣವನ್ನು ನೀಡಿ ದ್ದರು.
ಹಣ ಪಡೆದುಕೊಂಡಾತನ ಬಳಿ ಕೆಲಸದ ಬಗ್ಗೆ ವಿಚಾರಿಸಿದಾಗ ಶೀಘ್ರದಲ್ಲಿ ನೇಮಕಾತಿ ಪತ್ರ ನೀಡುವುದಾಗಿ ತಿಳಿಸಿದ್ದ. ನಂತರ ಆತನಿಂದ ನೌಕರಿ ಒದಗಿಸಲು ಆಗುವುದಿಲ್ಲವೆಂದು ಮನವರಿಕೆಯಾಗಿ ಆತನಲ್ಲಿ ಹಣವನ್ನು ಮರಳಿ ನೀಡುವಂತೆ ಕೇಳಿದಾಗ ಒಂದೆರಡು ಬಾರಿ ಹಣ ನೀಡುವುದಾಗಿ ತಿಳಿಸಿದ್ದ. ಇದುವರೆಗೂ ಹಣ ನೀಡುವುದಾಗಿ ಹೇಳುತ್ತಿದ್ದು ಆತ ಬೇರೆಯವರಿಗೆ ಕೆಲಸ ನೀಡುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ ಬಗ್ಗೆ ಮಾಹಿತಿ ತಿಳಿದು ಕೊಂಡಿರುತ್ತಾರೆ. ನಿವೃತ್ತ ಸೈನಿಕ ಮಧು ಬಿ.ಬಿ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣಾ ಅ.ಕ್ರ: 74/2025. ಕಲಂ: 420 IPC. ಯಂತೆ ಪ್ರಕರಣ ದಾಖಲಾಗಿರುತ್ತದೆ


