ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ಬಂಧಿಸಲಾಗಿದ್ದು, ನಟ ತಮಗೆ ಹಾಸಿಗೆ ಮತ್ತು ದಿಂಬು ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದು, ಇದೀಗ ನ್ಯಾಯಾಲಯವು ನಟನಿಗೆ ಬಿಗ್ ಶಾಕ್ ಅನ್ನು ನೀಡಿದೆ.
ದರ್ಶನ್ ಪರ ವಕೀಲರು ಜೈಲಿನಲ್ಲಿ ಸಿಗುವ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿಲ್ಲ ಎಂದು ತಮ್ಮ ವಾದವನ್ನು ನ್ಯಾಯಾಲಯದ ಮುಂದಿಟ್ಟಿದ್ದು, ಈ ಹಿನ್ನೆಲೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಆಧರಿಸಿ ನ್ಯಾಯಾಲಯ, ಕಾರಾಗೃಹದ ನಿಯಮಗಳ ಪ್ರಕಾರ ಹೆಚ್ಚುವರಿ ಸವಲತ್ತು ನೀಡಲಾಗಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಅ.31 ಕ್ಕೆ ವಿಚಾರಣೆ ನಿಗದಿಪಡಿಸಿದೆ.
ಜೈಲಿನ ಕೈಪಿಡಿ ಪ್ರಕಾರ, ಸವಲತ್ತುಗಳನ್ನು ಮಾತ್ರ ನೀಡಲಾಗುತ್ತದೆ. ತಿಂಗಳಿಗೆ ಒಂದು ಬಾರಿ ಚಾದರ್ ಮತ್ತು ಬಟ್ಟೆ ಬದಲಿಸಲು ಸೂಚನೆ ನೀಡಲಾಗಿದೆ. ಬೇರೆ ಬ್ಯಾರಿಕೇಡ್‌ಗೆ ಬೇಕಾದ್ರೆ ಜೈಲು ಅಧಿಕಾರಿಗಳು ಬದಲಿಸಬಹುದು. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಆರು ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 57 ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಎ5 ನಂದೀಶ್ ಅರ್ಜಿಯನ್ನು ನ್ಯಾಯಾಲಯ ಒದಗಿಸಲಾಗಿದೆ.
ಇನ್ನು ಆರೋಪಿ ನಟ ದರ್ಶನ್ ಅವರನ್ನು ಬಂಧಿಸಿಟ್ಟಿರುವ ಸೆಲ್ ಪಕ್ಕದಲ್ಲಿಯೇ ಪಾಕಿಸ್ತಾನದ ಉಗ್ರರ ಸೆಲ್ ಇದ್ದು, ಉಗ್ರರಿಗೆ ಕೇರಂ ಬೋರ್ಡ್ ಹಾಗೂ ಟಿವಿ ಸೇರಿದಂತೆ ಎಲ್ಲಾ ಐಷಾರಾಮಿ ಸೌಲಭ್ಯ ನೀಡಿದ್ದಾರೆ. ಆದರೆ ಆರೋಪಿ ನಟನಿಗೆ ಮಾತ್ರ ಹಾಸಿಗೆ, ಹೊದಿಕೆ ಮತ್ತು ತಲೆದಿಂಬು ನೀಡುತ್ತಿಲ್ಲ. ಹೀಗೆಂದು ನಟ ದರ್ಶನ್ ಪರ ವಕೀಲ ಎಸ್.ಸುನೀಲ್ ಕುಮಾರ್ ಬುಧವಾರ ನ್ಯಾಯಾಲಯದ ಮುಂದೆ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರು.


