ಮಂಗಳೂರು; ಸುರತ್ಕಲ್ ನಲ್ಲಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳ ಗುರುತು ಪತ್ತೆಯಾಗಿದೆ.ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಸಂಘ ಪರಿವಾರದ ಕಾರ್ಯಕರ್ತ ಗುರುರಾಜ್, ಆತನ ಸ್ನೇಹಿತರಾದ ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ಸೇರಿ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾತ್ರಿ ಸುಮಾರು 11 ಗಂಟೆಯ ವೇಳೆ ಮುಕ್ಷಿದ್ ಮತ್ತು ನಿಜಾಮ್ ಸುರತ್ಕಲ್‌ನ ದೀಪಕ್ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದಾಗ ರೌಡಿಶೀಟರ್ ಮತ್ತು ಬಜರಂಗದಳ ಕಾರ್ಯಕರ್ತ ಗುರುರಾಜ್, ಆತನ ಗೆಳೆಯರಾದ ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ಅಲ್ಲಿಗೆ ಬಂದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಎರಡೂ ಕಡೆಯುವರು ಜಗಳ ಆರಂಭಿಸಿದ್ದಾರೆ. ಬಾರ್‌ನಿಂದ ಹೊರಗೆ ಬಂದ ನಂತರವೂ ಜಗಳ ಮುಂದುವರಿದಿದ್ದು ಈ ಸಂದರ್ಭದಲ್ಲಿ ಆರೋಪಿಗಳ ಪೈಕಿ ಒಬ್ಬ ನಿಜಾಮ್‌ನ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ. ಪಕ್ಕದಲ್ಲೇ ಇದ್ದ ಮುಕ್ಷಿದ್ ಕೈಗೂ ಇರಿತವಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ರಾತ್ರಿಯೇ ತಂಡವನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ತಕ್ಷಣ ಪೊಲೀಸರ ಒಂದು ತಂಡ ಪ್ರಮುಖ ಆರೋಪಿ ಗುರುರಾಜ್ ನ ಅಡಗು ತಾಣಕ್ಕೆ ದಾಳಿ ಮಾಡಿದ್ದು, ಅಷ್ಟರಲ್ಲಾಗಲೇ ಆರೋಪಿಗಳು ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.


