Wednesday, June 24, 2026
Homeಕರಾವಳಿಮಂಗಳೂರುಧರ್ಮಸ್ಥಳದಲ್ಲಿ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಮಹಾ ಸಮ್ಮಿಲನ: ಧರ್ಮಸಿಪಾಯಿಗಳಾಗಿ ಧರ್ಮಸ್ಥಳ, ಹೆಗ್ಗಡೆಯವರ ರಕ್ಷಣೆ; ಡಾ.ಎಂ.ಮೋಹನ ಆಳ್ವ...

ಧರ್ಮಸ್ಥಳದಲ್ಲಿ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಮಹಾ ಸಮ್ಮಿಲನ: ಧರ್ಮಸಿಪಾಯಿಗಳಾಗಿ ಧರ್ಮಸ್ಥಳ, ಹೆಗ್ಗಡೆಯವರ ರಕ್ಷಣೆ; ಡಾ.ಎಂ.ಮೋಹನ ಆಳ್ವ ಭರವಸೆ

- Advertisement -
- Advertisement -

ಬೆಳ್ತಂಗಡಿ, ಸೆ.21: ಪೂಜ್ಯ ವೀರೇಂದ್ರ ಹೆಗ್ಗಡೆಯವರು ತನ್ನ ಸಾರ್ಥಕ ಬದುಕಿನ ಪ್ರೇರಕರು, ಮಾರ್ಗದರ್ಶಕರು. ಆದರೆ ಇಂದು ಅವರ ಬಗ್ಗೆ ಹಾಗೂ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಖೇದಕರ. ಹೆಗ್ಗಡೆಯವರ ಜತೆ ಹಿರಿಯ ವಿದ್ಯಾರ್ಥಿಗಳೆಲ್ಲರೂ ಧರ್ಮ ಸಿಪಾಯಿಗಳಾಗಿ ಧರ್ಮಸ್ಥಳದ ಪಾವಿತ್ರ್ಯತೆಯ ರಕ್ಷಣೆಗೆ ಸದಾ ಸಿದ್ಧರೂ, ಬದ್ಧರೂ ಎಂದು ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಉಡುಪಿಯ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ.ಎಂ.ಮೋಹನ ಆಳ್ವ ಭರವಸೆ ನೀಡಿದರು.

ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಸೆ.21 ರಂದು ಹಮ್ಮಿಕೊಂಡ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಮಹಾಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಗ್ಗಡೆಯವರ ದಕ್ಷ ನಾಯಕತ್ವ, ತಾಳ್ಮೆ, ವಿವೇಕ, ಸಂಯಮ ಹಾಗೂ ಸ್ಥಿತಪ್ರಜ್ಞ ಗುಣವನ್ನು ಶ್ಲಾಘಿಸಿದ ಆಳ್ವರು ಅವರು ಕಲಿಯುಗ ಕಲ್ಪವೃಕ್ಷ, ಕಾಮಧೇನು ಎಂದು ಬಣ್ಣಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜನೂ, ಋಷಿಯೂ ಆಗಿರುವ ಹೆಗ್ಗಡೆಯವರು ನಿಜವಾದ ಅರ್ಥದಲ್ಲಿ ರಾಜರ್ಷಿ ಎಂದ ಅವರು ಪಾರಂಪರಿಕ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗಾಭ್ಯಾಸಗಳಿಗೆ ಹೆಗ್ಗಡೆಯವರ ಸೇವೆ ಮತ್ತು ಕೊಡುಗೆಯನ್ನು ಸ್ಮರಿಸಿದರು.

ಪೂನಾದ ಕಾನೂನು ಕಾಲೇಜಿನ ಡೀನ್ ಹಾಗೂ ಮಂಗಳೂರಿನ ಎಸ್.ಡಿ.ಎಂ. ಕಾನೂನು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಮಾಜಿ ಉಪನ್ಯಾಸಕಿ ಪ್ರೊ. ಶಶಿಕಲಾ ಗುರುಪುರ ಮಾತನಾಡಿ, ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ. ಹೆಗ್ಗಡೆಯವರು ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಕಾಯಕ, ದುರ್ಬಲ ವರ್ಗದವರ ಸಬಲೀಕರಣ, ಮಹಿಳಾ ಸಬಲೀಕರಣ, ಸಮರ್ಪಣಾ ಮನೋಭಾವ, ತ್ಯಾಗ, ನಿಷ್ಠೆ, ಏಕಾಗ್ರತೆ ಮತ್ತು ಬದ್ಧತೆಯಿಂದಾಗಿ ಅವರು ನಿಜವಾದ ಒಬ್ಬ ದೇವಮಾನವ ಎಂದು ಬಣ್ಣಿಸಿದರು.

ಧಾರವಾಡದ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಡಾ. ಅನಿಲ್, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ, ಎಲ್ಲರೂ ಧರ್ಮಸ್ಥಳದ ರಾಯಭಾರಿಗಳಾಗಿದ್ದು ಹೆಗ್ಗಡೆಯವರ ಸೇವಾ ಕಾರ್ಯಗಳಿಗೆ ತೊಂದರೆಯಾಗದಂತೆ ನಿರಂತರ ಬೆಂಬಲ ನೀಡುವುದಲ್ಲದೆ ಹೆಗ್ಗಡೆಯವರ ಜತೆ ಸದಾ ಧರ್ಮಸ್ಥಳದ ಪಾವಿತ್ರ್ಯತೆಯ ರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ಭರವಸೆ ನೀಡಿದರು. 

ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಕ್ಷೇತ್ರದಿಂದ ಸರ್ವ ರೂಪದಲ್ಲೂ ಕೊಡುಗೆ ನೀಡಿದ್ದೇವೆ. ಆದರೆ ಇಂದು ಅನಾವಶ್ಯಕ ಷಡ್ಯಂತ್ರವಾಗಿದೆ. ಇದಕ್ಕೆ ಮಂಜುನಾಥ ಶಿಕ್ಷೆ ನೀಡುತ್ತಾನೆ. ಒಂದು ದಿವಸ ನಮಗಾಗಿ ಅಭಿಮಾನವಿಟ್ಟು ಬಂದಿರುವುದು ಸಂತೋಷವಾಗಿದೆ. ಈ ವಿಚಾರ ಮುಗಿದ ಬಳಿಕ ಉತ್ತಮ ವಿಚಾರದೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಗೌರವ ಸಲ್ಲಿಸಯತ್ತೇನೆ ಎಂದರು.

ಎಲ್ಲ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತದೆ. ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ಸಮಾಜದ ಸಭ್ಯ ಸುಸಂಸ್ಕೃತ ನಾಗರಿಕರನ್ನು ರೂಪಿಸಲಾಗುತ್ತದೆ. ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಹೆಗ್ಗಡೆಯವರು ಅಭಿನಂದಿಸಿದರು.

ಹೇಮಾವತಿ ವೀ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್ ಸಹಿತ ಹಿರಿಯ ವಿದ್ಯಾರ್ಥಿಗಳಾಗಿದ್ದು ನಾಡಿನ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಪ್ರಮುಖರು ಉಪಸ್ಥಿತರಿದ್ದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ವಂದಿಸಿದರು. ಮೂಡುಬಿದ್ರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ಬಿ.ಪಿ.ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

*ಠರಾವು ಮಂಡನೆ:

*ಎಲ್ಲ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಸದೃಢಗೊಳಿಸಿ ಪ್ರತಿವರ್ಷ ಆಯಾ ಸಂಸ್ಥೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ ನಡೆಸುವುದು.

*ಹಿರಿಯ ವಿದ್ಯಾರ್ಥಿಗಳು ಸದಾ ಹೆಗ್ಗಡೆಯವರ ಬೆಂಬಲಕ್ಕೆ ಬದ್ಧರು ಹಾಗೂ ಸಿದ್ಧರು.

*ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿವರ್ಷ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸುವುದು.

*ಅಪಪ್ರಚಾರ ವಿರುದ್ಧ ಕಾನೂನು ಕ್ರಮಕ್ಕೆ ಮುಖ್ಯಮಂತ್ರಿಯವರಿಗೆ ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಕದ್ರಿ ನವನೀತ ಶೆಟ್ಟಿ ಠರಾವು ಸಾದರಪಡಿಸಿ ಎಲ್ಲರ ಅಂಗೀಕಾರ ಪಡೆದರು.

*ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು..

- Advertisement -

Latest News

error: Content is protected !!