ಪುಣೆ; ಕಾರ್ಕಳ ಮೂಲದ ಹೋಟೆಲ್ ಮಾಲೀಕನನ್ನು ಕಾರ್ಮಿಕನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ನಿವಾಸಿ ಸಂತೋಷ್ ಶೆಟ್ಟಿ (46) ಕೊಲೆಯಾದವರು. ದಿಲೀಪ್ ಗಿರಿ ಕೊಲೆ ಮಾಡಿದ ಆರೋಪಿ.
ಹೊಟೇಲ್ ಮಾಲೀಕ ಸಂತೋಷ್ ಶೆಟ್ಟಿ ಆರೋಪಿ ದಿಲೀಪ್ ಗೆ “ಕೆಲಸ ಸರಿಯಾಗಿ ಮಾಡು” ಎಂದು ಪದೇ ಪದೇ ಸೂಚಿಸಿದ್ದರು. ಗಿರಿ ಇತ್ತೀಚೆಗಷ್ಟೆ ಕೆಲಸಕ್ಕೆ ಸೇರಿದ್ದ, ಅಲ್ಲದೆ ಸಂತೋಷ್ ಶೆಟ್ಟಿ ಅವರಿಂದ ಮುಂಗಡವಾಗಿ 2,500 ರೂ.ಗಳನ್ನು ಪಡೆದಿದ್ದರು. ಅದಾದ ನಂತರ, ದಿಲೀಪ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ. ಆದರೆ ಶೆಟ್ಟಿ “ಮೊದಲು ಕೆಲಸ ಸರಿಯಾಗಿ ಮಾಡು” ಎಂದು ಎಚ್ಚರಿಸಿದರು.
ಮಂಗಳವಾರ ರಾತ್ರಿ ಇಬ್ಬರ ನಡುವೆ ಸಣ್ಣ ಮಟ್ಟದ ಗಲಾಟೆ ನಡೆದಿದೆ. ಈ ವೇಳೆ ಆರೋಪ ಗಿರಿ ಹೋಟೆಲ್ ಅಡುಗೆಮನೆಯಿಂದ ಚಾಕು ತಂದು, ಶೆಟ್ಟಿಯ ಕುತ್ತಿಗೆಗೆ ಎರಡು ಬಾರಿ ಇರಿದಿದ್ದಾನೆ.ಈ ವೇಳೆ ಸಂತೋಷ್ ಶೆಟ್ಟಿ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಖಂಡಾರೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಂತೋಷ್ ಶೆಟ್ಟಿ ಅವರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಹುಟ್ಟೂರು ಎಣ್ಣೆಹೊಳೆಗೆ ತರಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


