ಬೆಂಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ ಧ್ವನಿಯೆತ್ತಿರುವ ಯೂಟ್ಯೂಬರ್ ಸಮೀರ್ ಎಂ.ಡಿಗೆ ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನನ್ನು ನೀಡಿದ್ದು, ಇದೀಗ ಸಮೀರ್ ಬಂಧನದ ಭೀತಿಯಿಂದ ಪಾರಾಗಿದ್ದಾರೆ.
ಸಮೀರ್ ಎಂ.ಡಿ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಧರ್ಮಸ್ಥಳದಲ್ಲಿ ಕೃತ್ಯ ನಡೆದಿದೆ ಎಂದು ಎಐ ಮೂಲಕ ಪ್ರಚೋದನಕಾರಿ ವಿಡಿಯೋ ಹರಿಯ ಬಿಟ್ಟು ವೈರಲ್ ಮಾಡಿದ್ದರು. ಈ ಕುರಿತು ಸಮೀರ್ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಧರ್ಮಸ್ಥಳ ಪೊಲೀಸರು ಜುಲೈ 12ರಂದು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು.
ಈ ಘಟನೆಯ ಬೆನ್ನಲ್ಲೇ ಸಮೀರ್ ಎಂಡಿ ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಆಗಸ್ಟ್ 19ರಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇದೀಗ ಆತನಿಗೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನನ್ನು ನೀಡಿದೆ. ಇದರಿಂದಾಗಿ ಸಮೀರ್ ಬಂಧನದ ಭೀತಿಯಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ. 21 ಗುರುವಾರದಂದು ಧರ್ಮಸ್ಥಳ ಪೊಲೀಸರು ಸಮೀರ್‌ನನ್ನು ಬಂಧಿಸಲು ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಹುಲ್ಲಳ್ಳಿಯಲ್ಲಿರುವ ಸಮೀರ್ ಮನೆಗೆ ಬಂದಿದ್ದಾರೆ. ಆದರೆ ಈ ಸಮಯದಲ್ಲಿ ಸಮೀರ್ ಮನೆಯಲ್ಲಿ ಇಲ್ಲ ಎನ್ನಲಾಗಿದ್ದು, ನಂತರದಲ್ಲಿ ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು ಎನ್ನಲಾಗಿದೆ.


