ಕಡಬ: ಹೈಕೋರ್ಟ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಜು.15 ರಂದು ವಿಚಾರಣೆ ನಡೆದಿದ್ದು, ಇದೀಗ ವಿಚಾರಣೆಯನ್ನು ಮುಂದೂಡಲಾಗಿದೆ.
ಘಟನೆಯ ವಿವರ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕಗೊಂಡಿರುವ ವ್ಯವಸ್ಥಾಪನಾ ಸಮಿತಿಯ ಆದೇಶದ ವಿರುದ್ಧ ಅರ್ಜಿದಾರರು ತಡೆಯಾಜ್ಞೆ ಕೇಳುವಾಗ ಸರಕಾರವನ್ನು ಮಾತ್ರ ಪ್ರತಿವಾದಿಯನ್ನಾಗಿ ಮಾಡಿದ್ದರು. ಈ ಕೇಸಿನಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಾದ ತನ್ನನ್ನು ಕೂಡ ಪ್ರತಿವಾದಿಯನ್ನಾಗಿ ಮಾಡಬೇಕೆಂದು ಹರೀಶ್ ಇಂಜಾಡಿ ಯವರು ಹೈಕೋರ್ಟನ್ನು ಕೇಳಿಕೊಂಡಿದ್ದರು. ಈ ಎಲ್ಲದರ ಬಗ್ಗೆ ಜು.15 ರಂದು ಹೈಕೋರ್ಟಲ್ಲಿ ವಿಚಾರಣೆ ನಡೆದಿದ್ದು, ಅರ್ಜಿದಾರರ ಪರವಾಗಿ ನ್ಯಾಯವಾದಿ ವಿವೇಕ್ ಸುಬ್ಬ ರೆಡ್ಡಿಯವರು ವಾದ ಮಂಡಿಸಿದರೆ, ಸರಕಾರದ ಪರವಾಗಿ ಹೆಚ್ಚುವರಿ ಅಡ್ವಕೇಟ್ ಜನರಲ್ ದೇವದಾಸ್, ಹರೀಶ್ ಇಂಜಾಡಿಯವರ ಪರವಾಗಿ ಹಿರಿಯ ಕೌನ್ಸೆಲ್ ರವಿಶಂಕರ್ ಹಾಗೂ ನ್ಯಾಯವಾದಿ ಕರುಣಾಕರ ಗೌಡರು ವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವ್ಯವಸ್ಥಾಪನಾ ಸಮಿತಿ ನೇಮಕದ ವಿರುದ್ಧ ತಡೆಯಾಜ್ಞೆ ವಿಚಾರಣೆ ವೇಳೆ ಹರೀಶ್ ಇಂಜಾಡಿಯವರನ್ನು ಮಾತ್ರ ಪ್ರತಿವಾದಿಯಾಗಿ ಮಾಡಲು ಒಪ್ಪದೆ ವ್ಯವಸ್ಥಾಪನಾ ಸಮಿತಿಯ ಎಲ್ಲಾ ಒಂಬತ್ತು ಮಂದಿ ಸದಸ್ಯರನ್ನು ಪ್ರತಿವಾದಿಗಳನ್ನಾಗಿ ಮಾಡಿ ನೋಟೀಸು ಜಾರಿ ಮಾಡಲು ನ್ಯಾಯಮೂರ್ತಿಯವರು ನಿರ್ದೇಶಿಸಿದರೆಂದು ತಿಳಿಸಲಾಗಿದೆ.


