ಮಂಗಳೂರು;OLX ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿ ನಿವಾಸಿ ರವಿಚಂದ್ರ ಮಂಜುನಾಥ ರೇವಣಕರ(29) ಬಂಧಿತ. ಈತನನ್ನು ಮಂಗಳೂರು ಸೆನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
OLX ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಸುಮಾರು 2.50 ಲಕ್ಷ ವಂಚನೆ ಆಗಿರುವ ಕುರಿತು ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅದರಂತೆ ಆರೋಪಿಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿ ಹೊಸಪೇಟೆಯಲ್ಲಿರುವ ಬಗ್ಗೆ ಮಾಹಿತಿ ಗೊತ್ತಾಗಿದೆ, ಕೂಡಲೇ ಬೇರೆ ಪ್ರಕರಣದಲ್ಲಿ ಹೊಸಪೇಟೆ ಹತ್ತಿರ ಆರೋಪಿ ಪತ್ತೆ ಕರ್ತವ್ಯದ್ದಲ್ಲಿದ್ದ ಸೆನ್ ಪೊಲೀಸ್ ಠಾಣಾ ತನಿಖಾ ತಂಡವನ್ನು ಹೊಸಪೇಟೆಗೆ ಕಳುಹಿಸಿ ಆರೋಪಿತ ರವಿಚಂದ್ರ ಮಂಜುನಾಥ ರೇವಣಕರ ನನ್ನು ವಶಕ್ಕೆ ಪಡೆದು ಸೆನ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ.
ತನಿಖೆಯ ವೇಳೆ ಆರೋಪಿತನು ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 21 ಬ್ಯಾಂಕ್ ಖಾತೆಗಳುನ್ನು ಹೊಂದಿದ್ದು, ಹಾಗೂ 08 ಸಿಮ್ ಕಾರ್ಡ್ ಗಳು ಬಳಕೆ ಮಾಡಿದ್ದು ಕಂಡು ಬಂದಿರುತ್ತದೆ. ಸದ್ಯ 08 ಮೊಬೈಲ್ ನಂಬ್ರ ಗಳ ಮೇಲೆ 80 ಕ್ಕೂ ಹೆಚ್ಚಿನ ಸೈಬರ್ ವಂಚನೆ ದೂರುಗಳು ದಾಖಲಾಗಿರುವುದು ತಿಳಿದುಬಂದಿರುತ್ತದೆ.
ಆರೋಪಿತನು ಕಳೆದ 03 ವರ್ಷಗಳಿಂದ OLX APP ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ತಾನು ಉಪಯೋಗಿಸುತ್ತಿದ್ದ ಮೊಬೈಲ್ ನ್ನು ಕೆಲವು ದಿನಗಳ ಮಟ್ಟಿಗೆ ಇಟ್ಟುಕೊಂಡು ಅದನ್ನು ಮಾರಾಟ ಮಾಡುತ್ತಿದ್ದು, ಹೊಸ ಸಿಮ್ ಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.