ಕಡಬ: ಸಾಲ ತೀರಿಸಲು ಕಳ್ಳತನ ಮಾಡಿ ಖದೀಮನೊಬ್ಬ ಮತ್ತೆ ಜೈಲು ಸೇರಿದ್ದಾನೆ.ಕಡಬ ಠಾಣಾ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಬಜಕೆರೆ ಎಂಬಲ್ಲಿ ಭಾನುವಾರ ಅಟೋ ಚಾಲಕ ಕುರಿಯಕೋಸ್ ಯಾನೆ ಜೇಮ್ಸ್ ಅವರು ಪತ್ನಿ ಹಾಗೂ ಮಗನೊಂದಿಗೆ ಮನೆಗೆ ಬೀಗ ಹಾಕಿ ಚರ್ಚ್ ಗೆ ಹೋಗಿದ್ದರು. ಈ ವೇಳೆ ಅವರ ಮನೆಯಲ್ಲಿ ಕಳ್ಳತನವಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೆಲವು ಸಾಕ್ಷ್ಯಗಳ ಆಧಾರದಲ್ಲಿ ಕೆರ್ಮಾಯಿ ಚರ್ಚ್ ಬಳಿಯ ಸಿನುಕುರಿಯನ್ಎಂಬಾತನನ್ನು ಬುಧವಾರ ರಾತ್ರಿಯೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಬೈಕ್ ನಲ್ಲಿ ಬಂದು ಕೊಟ್ಟಿಗೆಯಿಂದ ಪಿಕ್ಕಾಸು ತಂದು ಬಾಗಿಲು ಮುರಿದು ಕಳ್ಳತನ ಮಾಡಿದ್ದಾನೆ.ಅಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿದ ಕಾರಣ ಕಳ್ಳತನ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಈತ ಕಡಬದ ಟೆಕ್ಸ್ ಟೈಲ್ ವೊಂದರಲ್ಲಿ ಕೆಲಸಮಾಡುತ್ತಿದ್ದ.
ಸದ್ಯ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಕಳ್ಳತನ ಮಾಡಿರುವ ಹಣದಲ್ಲಿ ಸಾಲವನ್ನು ತೀರಿಸಿ ಉಳಿದ ಹಣವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕರು, ಕಡಬ ಠಾಣಾ ಎಸ್.ಐ ಅಭಿನಂದನ್, ತನಿಖಾ ಎಸ್.ಐ ಅಕ್ಷಯ್ ಡವಗಿ, ಕಾನ್ಸ್ಟೇಬಲ್ ಗಳಾದ ಸಿದ್ದಪ್ಪ, ಹರ್ಷಿತ್ ಪಾಲ್ಗೊಂಡಿದ್ದರು.


