ಮಂಗಳೂರು: ಖಬರಸ್ತಾನದ ಭೂಮಿ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ವೇಳೆ ಹೈಡ್ರಾಮಾ ನಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಟಿಪ್ಪು ಸುಲ್ತಾನ್ ಕಾಲಕ್ಕೆ ಸೇರಿದ್ದೆನ್ನಲಾದ ಖಬರಸ್ತಾನದ ಭೂಮಿಯನ್ನು ಲಪಟಾಯಿಸಿದ ಆರೋಪದ ಹಿನ್ನೆಲೆಯಲ್ಲಿ
ಬಿಕರ್ನಕಟ್ಟೆಯ ಅಹ್ಸಾನುಲ್ ಮಸೀದಿಯಲ್ಲಿ ವಿವಾದ ಉಂಟಾಗಿದ್ದು, ವಿವಾದಿತ ಜಾಗದಲ್ಲಿ ಸಂಘರ್ಷ ನಡೆದಿದೆ.
ಉಸ್ಮಾನ್ ಎಂಬವರ ಕುಟುಂಬದಿಂದ ಮಸೀದಿಯ ಖಬರಸ್ತಾನದ ಭೂಮಿ ಕಬಳಿಸಲ್ಪಟ್ಟಿದೆ ಎಂದು ಆರೋಪಿಸಿ ಇಂದು ಮಸೀದಿ ಆಡಳಿತದಿಂದ ಬಿಕರ್ನಕಟ್ಟೆಯಲ್ಲಿ ಪ್ರತಿಭಟನೆ ನಡೆದಿದ್ದು, ಈ ವೇಳೆ ಆರೋಪ ಎದುರಿಸುತ್ತಿರುವ ಕುಟುಂಬದ ಮಹಿಳೆಯಿಂದ ರಂಪಾಟ ನಡೆದಿದೆ.
ಪ್ರತಿಭಟನಾಕಾರರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಬ್ಯಾನರ್ ಕಿತ್ತೆಸೆದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದು,
ಉಸ್ಮಾನ್ ಎಂಬವರುವ ಪ್ರತಿಭಟನಾಕಾರನೋರ್ವನ ಶರ್ಟ್ ಹರಿದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮಸೀದಿ ಪಕ್ಕದಲ್ಲಿರುವ ಮೂವತ್ತು ಸೆಂಟ್ಸ್ ಜಾಗ ಖಬರಸ್ತಾನ ಆಗಿತ್ತು ಎಂದು ಮಸೀದಿ ಆಡಳಿತದ ವಾದವಾಗಿದ್ದು, ಅದು ನಮ್ಮ ಖಾಸಗಿ ಜಾಗ ಎಂದು ಉಸ್ಮಾನ್ ಕುಟುಂಬ ಹೇಳುತ್ತಿರುವ ಕಾರಣ ಮಸೀದಿ ಆಡಳಿತ ಮಂಡಳಿ ಮತ್ತು ಮುಸ್ಲಿಂ ಕುಟುಂಬದ ನಡುವೆ ಕಿತ್ತಾಟ ನಡೆದಿದೆ.ಕದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪರಸ್ಪರ ಹೊಡೆದಾಡಿಕೊಳ್ಳುವ ಹಂತಕ್ಕೆ ಭೂ ಸಂಘರ್ಷ ತಲುಪಿದೆ.


