ಮಂಡ್ಯ: ಸಿಎಂ ಸಿದ್ದರಾಮಯ್ಯ ಇಡಿ ತನಿಖೆಯ ಕುರಿತು ತಮ್ಮ ಆಕ್ರೋಶವನ್ನು ವ್ಯಕ್ತಿಪಡಿಸಿದ್ದು, ಇ.ಡಿಗೆ ತನಿಖೆ ಮಾಡಲು ಅಧಿಕಾರವೇ ಇಲ್ಲ. ಇದೊಂದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶವಾಗಿದೆ ಎಂದು ಟೀಕಿಸಿದರು.
ಅವರು ಮಂಡ್ಯದ ಕೆಆರ್ ಪೇಟೆಯಲ್ಲಿ ಮಾತನಾಡಿ, ‘ಮುಡಾ ಹಗರಣದ ಕುರಿತು ನಡೆಯುತ್ತಿರುವ ಇಡಿ ತನಿಖೆಯು ರಾಜಕೀಯ ಪ್ರೇರಿತವಾಗಿದೆ. ನಾಳೆ ಈ ಕುರಿತಂತೆ ನ್ಯಾಯಾಲಯದಲ್ಲಿ ಕೇಸ್ ಬರ್ತಾ ಇದ್ದು, ಸಿಂಗಲ್ ಜಡ್ಜ್ ಬೆಂಚ್‌ನಲ್ಲಿದೆ. ಅದು ನಾವು ಹಾಕಿರೋ ಅಪೀಲು. ಈಗ ಇ.ಡಿ ಅವರು ಮಾಡ್ತಾ ಇದಾರೆ ಅಂದ್ರೆ ಏನು ಅರ್ಥ? ಕೋರ್ಟ್ ಮೇಲೆ ಒತ್ತಡ ಹಾಕಲು ಹೀಗೆ ಮಾಡಿದ್ದಾರೆ.ಈಗಾಗಲೇ ಈ ಬಗ್ಗೆ ಲೋಕಾಯುಕ್ತ ತನಿಖೆ ಮಾಡುತ್ತಿದ್ದು, ಅವರೇ ತನಿಖೆ ಮಾಡಿ ವರದಿ ನೀಡುತ್ತಾರೆ. ಆದರೆ ಇಲ್ಲಿ ಇಡಿ ಲೋಕಾಯುಕ್ತ ಮೇಲೆ ಒತ್ತಡ ಹಾಕಲು ಹೀಗೆ ಮಾಡುತ್ತಿದೆ. ಇದೊಂದು ರಾಜಕೀಯ ಪ್ರೇರಿತ ದುರುದ್ದೇಶ ಎಂದು,’ ಅಸಮಾಧಾನ ಹೊರಹಾಕಿದರು.
ನಾಳೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸ್ವಾಭಿಮಾನಿ ಒಕ್ಕೂಟದಲ್ಲಿ ಸಮಾವೇಶ ನಡೆಯುತ್ತಿದ್ದು, ಹೆಚ್ಚಿನ ಜನರನ್ನ ಸ್ವಾಭಿಮಾನಿ ಒಕ್ಕೂಟದಿಂದ ಕರೆದುಕೊಂಡು ಬರಲಾಗುತ್ತಿದೆ. ಈ ಸಮಾವೇಶವನ್ನು ಕಾಂಗ್ರೆಸ್ ಪಕ್ಷದ ಸಹಯೋಗದಲ್ಲಿ ಮಾಡಲಾಗುತ್ತಿದೆ ಎಂದರು.


