ಬಂಟ್ವಾಳ: ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದಾಗಲೇ ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಮೃತಪಟ್ಟ ಸಿಬ್ಬಂದಿ ವೀರಕಂಬ ಮಜ್ಜೋನಿ ನಿವಾಸಿ ಜಯರಾಮ ಮೂಲ್ಯ (47) ಎನ್ನಲಾಗಿದೆ.
ಅವರು ನ.29ರಂದು ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದೇ ದಿನ ಸಂಜೆ ತನ್ನ ಇಲಾಖೆಯ ಜೊತೆ ಕೆಲಸಗಾರರಲ್ಲಿ ತಲೆಸುತ್ತು ಬರುವ ವಿಚಾರವನ್ನು ಹೇಳಿಕೊಂಡಿದ್ದರು. ಬಳಿಕ ರಾತ್ರಿ ಸಂದರ್ಭದಲ್ಲಿ ಕಚೇರಿಯಲ್ಲಿ ಇವರೊಬ್ಬರೇ ಕರ್ತವ್ಯದಲ್ಲಿದ್ದು, ಮುಂಬಾಗಿಲ ಚಿಲಕ ಹಾಕಿಕೊಂಡು ಕೋಣೆಯೊಳಗೆ ಮಲಗಲು ಹೋಗುವ ವೇಳೆ ಟೇಬಲ್ ಮೇಲೆ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾಗಿರಬೇಕು ಎನ್ನಲಾಗಿದೆ.
ಇಲಾಖೆಯ ಚಾಲಕ ಬೆಳಿಗ್ಗೆ ಸುಮಾರು 6.30 ವರೆಯವರೆಗೂ ಇಲಾಖೆಯ ಬಾಗಿಲು ಮುಚ್ಚಿಕೊಂಡಿದ್ದನ್ನು ಕಂಡು ಕಿಟಕಿ ಬಾಗಿಲು ತೆರದು ನೋಡಿದಾಗ ಜಯರಾಮ ಅವರು ಟೇಬಲ್ ಮೇಲೆ ಬಿದ್ದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಬಾಗಿಲಿನ ಚಿಲಕ ಮುರಿದು ಒಳಗೆ ಹೋಗಿ ನೋಡಿದಾಗ ಇವರು ಅದಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ.
ಮೃತ ಜಯರಾಮ ಮೂಲ್ಯ ಅವರು ತಾಯಿ ಹಾಗೂ ಇಬ್ಬರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.


