ಪುತ್ತೂರು; ಇಲ್ಲಿನ ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದೆ ಎಂಬ ಸುದ್ದಿಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಮಹಿಳೆ ಸುಳ್ಳು ಕಥೆ ಕಟ್ಟಿದ್ದು ಇದೀಗ ಬಯಲಾಗಿದೆ.
ಕೇರಳ ಮೂಲದ ಕೆಯ್ಯೂರು ನಿವಾಸಿ ಮಾರ್ಗರೇಟ್ ಎಂಬ ಮಹಿಳೆ ಕಳೆದ 4 ತಿಂಗಳ ಹಿಂದೆ ಕೆಯ್ಯೂರಿಗೆ ಬಂದು ಬಾಡಿಗೆ ಮನೆಯೊಂದರಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದರು. ಮಂಗಳವಾರ ರಾತ್ರಿ ಸುಮಾರು 8.30ರ ವೇಳೆಗೆ ಮನೆಗೆ ನಾಲ್ವರು ದರೋಡೆಕೋರರು ಬಂದಿದ್ದರು. ಕಿಟಕಿಯ ಮೂಲಕ ಅವರ ಫೋಟೊ ತೆಗೆದಿದ್ದೇನೆ’ ಎಂದು ಮಹಿಳೆಯು ಫೋಟೊವೊಂದನ್ನು ಮನೆಯ ಮಾಲೀಕರಿಗೆ ವಾಟ್ಸಾಪ್ ಕಳುಹಿಸಿದ್ದರು.
ಸ್ಥಳೀಯರು ಈ ಬಗ್ಗೆ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಸರ್ಕಲ್ ಇನ್‌ಸ್ಪೆಕ್ಟರ್ ರವಿ.ಬಿ.ಎಸ್, ಆ ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದ್ದರು. ಆಕೆ ಹಂಚಿಕೊಂಡ ಫೋಟೊಗಳು ಕೊಟ್ಟಾಯಂನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಘಟನೆ ಕುರಿತು ಪ್ರಸಾರವಾಗಿದ್ದ ವಿಡಿಯೊ ಸ್ಟೋರಿಯ ಸ್ಟೀನ್ ಶಾಟ್ ಎಂದು ಗೊತ್ತಾಗಿತ್ತು. ಊರಿಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿದ್ದಾರೆ ಎಂಬ ಸುದ್ದಿ ಕೇಳಿ ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ಪೊಲೀಸರು ಈ ವಿಚಾರವನ್ನು ಅಲ್ಲಗಳೆದ ಬಳಿಕ ಆತಂಕ ದೂರವಾಯಿತು.
ನನ್ನ ಮನೆಗೆ ನಿಜವಾಗಿಯೂ ದರೋಡೆಕೋರರು ಬಂದಿದ್ದಾರೆ’ ಎಂದೇ ಪೊಲೀಸರಲ್ಲಿ ವಾದಿಸಿದ್ದರು. ಮೊಬೈಲ್ ವಶಕ್ಕೆ ಪಡೆದ ಪೊಲೀಸರ ಮೇಲೂ ರೇಗಾಡಿದ್ದ ಆಕೆ ‘ನಿಮ್ಮನ್ಯಾರು ಇಲ್ಲಿಗೆ ಬರಲು ಹೇಳಿದ್ದು. ನನ್ನ ಮೊಬೈಲ್ ಮರಳಿಸದಿದ್ದರೆ ಕೇರಳದ ಪೊಲೀಸರನ್ನು ಕರೆಸುತ್ತೇನೆ’ ಎಂದು ಇಂಗ್ಲೀಷ್ ಮತ್ತು ಮಲಯಾಳ ಭಾಷೆಯಲ್ಲಿ ಗದರಿಸಿದ್ದರು. ಸುದ್ದಿ ಪ್ರಸಾರ ಮಾಡಲು ಸ್ಥಳಕ್ಕೆ ತೆರಳಿದ ಮಾಧ್ಯಮದವರ ಮೇಲೂ ರೇಗಾಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ಮಹಿಳೆ ಹೀಗ್ಯಾಕೆ ಮಾಡಿದರು ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.


