ಮಂಗಳೂರು: ಇನ್ನು ಮುಂದೆ ವಾಹನ ಚಾಲಕರು ಸಂಚಾರ ನಿಯಮವನ್ನು ಉಲ್ಲಂಘಿಸಿದರೆ, ದಂಡ ಪಾವತಿಸಿ ಸುಮ್ಮನಾಗಲು ಸಾಧ್ಯವಿಲ್ಲ. ಯಾಕೆಂದರೆ ಇದೀಗ ಪೊಲೀಸರು ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಸಂಚಾರ ನಿಯಮವನ್ನು ಉಲ್ಲಂಘಿಸಿದವರ ಚಾಲನಾ ಪರವಾನಿಗೆಯನ್ನು ಅಮಾನತು ಮಾಡುವ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು “ಡಿಎಲ್ ಅಮಾನತು” ಅಸ್ತ್ರವನ್ನು ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯೋಗಿಸಲು ಮುಂದಾಗಿದ್ದಾರೆ. ದಕ್ಷಿನ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಪೊಲೀಸರು ಕೂಡ “ಡಿಎಲ್ ಅಮಾನತು”ಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಒಂದು ವರ್ಷದಲ್ಲಿ ಸಾವಿರಕ್ಕೂ ಅಧಿಕ ಡಿಎಲ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಡಿಎಲ್ ಅಮಾನತು ಕುರಿತ ಹೆಚ್ಚಿನ ವಿವರ: ಪೊಲೀಸರು ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಯಾವುದೇ ರೀತಿಯ ವಾಹನ ಸಂಚಾರ ನಿಯಮ ಉಲ್ಲಂಘನೆಯಾದರೂ ಡಿಎಲ್ ಅಮಾನತಿಗೆ ಶಿಫಾರಸು ಮಾಡಬಹುದಾಗಿದೆ. ದ.ಕ. ಜಿಲ್ಲಾ ಪೊಲೀಸ್, ಮಂಗಳೂರು ಪೊಲೀಸ್ ಕಮಿಷನರೆಟ್ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಹೆಚ್ಚಾಗಿ ಮದ್ಯ ಸೇವಿಸಿ ವಾಹನ ಚಾಲನೆ, ಅಪಘಾತದಿಂದ ಸಾವು ಸಂಭವಿಸುವಂಥ ಗಂಭೀರ ಪ್ರಕರಣಗಳು, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ, ಏಕಮುಖೀ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು, ಪದೇಪದೆ ಸಂಚಾರ ನಿಯಮ ಉಲ್ಲಂಘಿಸುವುದು ಮುಂತಾದ ಪ್ರಕರಣಗಳಲ್ಲಿ ಡಿಎಲ್ ಅಮಾನತು ಮಾಡಲಾಗುತ್ತಿದೆ ಎನ್ನುವುದನ್ನು ತಿಳಿಸಿದ್ದಾರೆ.
ಅಮಾನತು ಅವಧಿಯು ಕನಿಷ್ಠ 1ರಿಂದ 6 ತಿಂಗಳ ಅವಧಿಗಿದ್ದು, ಸಾವು ಸಂಭವಿಸುವಂಥ ಪ್ರಕರಣಗಳಲ್ಲಿ 6 ತಿಂಗಳವರೆಗೂ ಡಿಎಲ್ ಅಮಾನತು ಮಾಡಲಾಗುತ್ತಿದೆ. ಇನ್ನು ಆರ್‌ಟಿಒ ಅಧಿಕಾರಿಗಳು ಪೊಲೀಸರು ನೀಡುವ ಶಿಫಾರಸಿನ ಬಳಿಕ ನೋಟಿಸ್ ಪ್ರಕ್ರಿಯೆ ನಡೆಸಿ ಅಮಾನತುಗೊಳಿಸುತ್ತಾರೆ.


