Friday, June 5, 2026
Homeಕರಾವಳಿಉಡುಪಿವಿಶ್ವ ಹಿಂದೂ ಪರಿಷತ್ತಿಗೆ 60 ವರ್ಷ; ಸೆ.1ರವರೆಗೆ ವಿಶೇಷ ಕಾರ್ಯಕ್ರಮ; ಶರಣ್ ಪಂಪ್‌ವೆಲ್

ವಿಶ್ವ ಹಿಂದೂ ಪರಿಷತ್ತಿಗೆ 60 ವರ್ಷ; ಸೆ.1ರವರೆಗೆ ವಿಶೇಷ ಕಾರ್ಯಕ್ರಮ; ಶರಣ್ ಪಂಪ್‌ವೆಲ್

- Advertisement -
- Advertisement -

ಮಂಗಳೂರು: `ವಿಶ್ವ ಹಿಂದೂ ಪರಿಷತ್ತಿಗೆ ಈಗ ಷಷ್ಠಿಪೂರ್ತಿ ಸಂಭ್ರಮ. 1964ರ ಆ. 29ರಂದು ಮುಂಬೈ ಸಾಂದೀಪಿನಿ ಆಶ್ರಮದಲ್ಲಿ ಹಿಂದೂ ಧರ್ಮ, ಸಂಸ್ಕೃತಿ, ಸ್ವಾಭಿಮಾನದ ರಕ್ಷಣೆಗಾಗಿ ಆರಂಭವಾದ ವಿಎಚ್‌ಪಿಗೆ 60 ವರ್ಷಗಳನ್ನು ಪೂರೈಸಿದ್ದು, ಈ ಪ್ರಯುಕ್ತ ರಾಜ್ಯದಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ’ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದರು. 

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ವಿಶ್ವ ಹಿಂದೂ ಪರಿಷತ್ತು ದೇಶದಲ್ಲಿ 90 ಸಾವಿರಕ್ಕೂ ಹೆಚ್ಚು ಕಡೆ ಚಟುವಟಿಕೆ ಹಮ್ಮಿಕೊಳ್ಳುತ್ತಿದೆ. ಗೋ ರಕ್ಷಣೆ ಹಾಗೂ ಶ್ರದ್ಧಾಕೇಂದ್ರಗಳನ್ನು ಉಳಿಸಲು ಹೋರಾಡುತ್ತಿದೆ.  ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಆಂದೋಲನ, ಅಮರನಾಥ, ರಾಮಸೇತು, ತಿರುಪತಿ ಉಳಿಸಿ ಹೋರಾಟ ಹಾಗೂ ರಾಜ್ಯದಲ್ಲಿ ದತ್ತಪೀಠ ರಕ್ಷಣೆಯ ಹೋರಾಟಗಳಿಗೆ ನೇತೃತ್ವ ನೀಡಿದೆ. ಸಂಘಟನೆಯು ಜಗತ್ತಿನ 50ಕ್ಕೂ ಹೆಚ್ಚು ದೇಶಗಳಲ್ಲಿ ಹಿಂದುಗಳನ್ನು ಸಂಘಟಿಸುವುದರ ಜೊತೆಗೆ, ಹಿಂದೂ ಧಾರ್ಮಿಕ ಆಚರಣೆಗಳ ಮಹತ್ವವನ್ನು ಸಾರುತ್ತಿದೆ’ ಎಂದರು.

ವಿಎಚ್‌ಪಿ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ‘ವಿಎಚ್‌ಪಿಯು ಸೆ.1ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 21 ಪ್ರಖಂಡಗಳಲ್ಲಿ ಹಿಂದೂ ಸಮಾವೇಶ, ಸಮ್ಮೇಳನ, ಶೋಭಾಯಾತ್ರೆ ಮೆರವಣಿಗೆ, ಕ್ರೀಡಾಕೂಟಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ್, ಉಪಾಧ್ಯಕ್ಷ ಮನೋಹರ್ ಸುವರ್ಣ, ಕಾರ್ಯದರ್ಶಿ ರವಿ ಅಸೈಗೋಳಿ ಭಾಗವಹಿಸಿದ್ದರು.

- Advertisement -

Latest News

error: Content is protected !!