ಬೆಳ್ತಂಗಡಿ : ಅಪ್ರಾಪ್ತ ವಯಸ್ಸಿನ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಹಲವಾರು ಬಾರಿ ಲೈಂಗಿಕ ಸಂಪರ್ಕ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಠಾಣೆಯಲ್ಲಿ 3-03-2022 ರಂದು ನೀಡಿದ ದೂರಿನಂತೆ 4 & 6 ಪೋಕ್ಸೋ ಕಾಯ್ದೆ & 376 ಐಪಿಸಿಯಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬಳಿಕ ಈ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ ರವರು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಎರ್ಮಾಳ ಪಲ್ಕೆ ನಿವಾಸಿ ಐತಪ್ಪ ನಲಿಕೆ ಮಗನಾದ ಆರೋಪಿ ಬಾಬಿ (48) ಎಂಬಾತನನ್ನು ಬಂಧಿಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿ ಆರೋಪಿಯ ವಿರುದ್ಧ ಬೆಳ್ತಂಗಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದಾಗ ಆರೋಪಿತನ ಆರೋಪ ಸಾಬೀತಾಗಿರುತ್ತದೆ. ಈ ಪ್ರಕರಣದ ವಿಚಾರಣೆ ನಡೆಸಿ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ -2 (ಪೋಕ್ಸೋ) ಇದರ ನ್ಯಾಯಾಧೀಶರಾದ ರಾಧಾಕೃಷ್ಣ ರವರು ಜ.24 ರಂದು ಅಪರಾಧಿಗೆ 20 ವರ್ಷಗಳ ಕಾರಾಗೃಹ ಹಾಗೂ 50 ಸಾವಿರ ರೂಪಾಯಿ ದಂಡ , ದಂಡ ಹಣ ತಪ್ಪಿದಲ್ಲಿ 6 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿರುತ್ತಾರೆ.
ಈ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋನಾವಣೆ, ಐ.ಪಿ.ಎಸ್ ,ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಮತ್ತು ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ಥೋರಾಟ್ ನಿರ್ದೇಶನದಂತೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ ರವರು ತನಿಖೆಯನ್ನು ನಡೆಸಿದ್ದರು.
ನಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲು ಪ್ರಕರಣಗಳ ತನಿಖಾ ಸಹಾಯಕರಾಗಿ ಹೆಡ್ ಕಾನ್ಸ್ಟೇಬಲ್ ವಿಜಯಕುಮಾರ್ ರೈ ರವರು ಕಾರ್ಯನಿರ್ವಹಿಸಿರುತ್ತಾರೆ, ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟ್ರಮಣ ಸ್ವಾಮಿ ರವರು ನ್ಯಾಯಾಲಯದಲ್ಲಿ ವಾದಿಸಿರುತ್ತಾರೆ.