ಉಡುಪಿ, ಜೂನ್ 16: ಬೆಂಗಳೂರಿನಿಂದ ಕೋಟೇಶ್ವರದಲ್ಲಿನ ಮನೆಗೆ ಹೊರಟಿದ್ದ ಯುವಕ ಹೃದಯಾಘಾತದಿಂದ ಬಸ್‌ನಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಕುಂದಾಪುರದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಕೋಟೇಶ್ವರ ಕುಂಬ್ರಿಯ ವಿಷ್ಣುಮೂರ್ತಿ ಅವರ ಮಗ ಚೈತನ್ಯ (25) ಸಾವನ್ನಪ್ಪಿದ ದುರ್ದೈವಿ.
ಬೆಂಗಳೂರಿನಲ್ಲೇ ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದ ಯುವಕ, ಎರಡು ವರ್ಷಗಳಿಂದ ಅಲ್ಲಿನ ಮಾರತನಹಳ್ಳಿಯ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು. ಕೆಲಸ ಕಡಿಮೆ ಇರುವ ಕಾರಣ ಮನೆಗೆ ಬರುತ್ತಿರುವು ದಾಗಿ ಅವರು ಮನೆಯವರಿಗೆ ತಿಳಿಸಿದ್ದರು.
ಸೋಮವಾರ ರಾತ್ರಿ ಅವರು ಖಾಸಗಿ ಬಸ್‌ನಲ್ಲಿ ಊರಿಗೆ ಹೊರಟಿದ್ದರು. ಬೆಳಗ್ಗೆ 6:30ರ ಸುಮಾರಿಗೆ ಮನೆಗೆ ಕರೆ ಮಾಡಿ, ಬಾರಕೂರು ಬಳಿ ಬರುತ್ತಿರು ವುದಾಗಿ ತಿಳಿಸಿದ್ದರು. ಆದರೆ ಇವರು ಕೋಟೇಶ್ವರದಲ್ಲೂ ಇಳಿಯದಿದ್ದಾಗ ನಿರ್ವಾಹಕನಿಗೆ ಅನುಮಾನ ಬಂದು ಹತ್ತಿರ ಬಂದು ನೋಡಿದಾಗ ಚೈತನ್ಯ ಅಸ್ವಸ್ಥಗೊಂಡಿರುವುದನ್ನು ಗಮನಿಸಿದರು.
ಚೈತನ್ಯರಿಗೆ ಮನೆಯಿಂದ ಕರೆ ಬಂದಾಗ ಅವರನ್ನು ಸ್ವೀಕರಿಸಿ ವಿಷಯ ತಿಳಿಸಿದ ನಿರ್ವಾಹಕರು, ಸಮೀಪದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿದರು. ಆದರೆ ಅಲ್ಲಿಗೆ ಕರೆದೊಯ್ಯುವ ವೇಳೆಗೆ ಚೈತನ್ಯ ಸಾವನ್ನಪ್ಪಿರುವುದನ್ನು ವೈದ್ಯರು ದೃಢ ಪಡಿಸಿದರು. ಅವರು ಹೃದಯಾಘಾತದಿಂದ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.
ದೇ ಮಾರ್ಚ್ ನಲ್ಲಿ ಬೆಂಗಳೂರಿನಿಂದ ಕುಂದಾಪುರಕ್ಕೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರಯಾಣದ ನಡುವೆಯೇ ಹೃದಯಾಘಾತದಿಂದ ಮೃತಪಟ್ಟಿದ್ದ ಸಂಗತಿ ನಡೆದಿತ್ತು.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ.