Friday, May 3, 2024
Homeಉತ್ತರ ಕನ್ನಡಮಂಗಳೂರು; ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣ; ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್...

ಮಂಗಳೂರು; ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣ; ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

spot_img
- Advertisement -
- Advertisement -

ಮಂಗಳೂರು: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಕಾವಳಗದ್ದೆಯ ಸಚಿನ್ ಸಂತೋಷ್ ನಾಯ್ಕ್ (22) ಮತ್ತು ಹಟ್ಟಿಕೆರೆಯ ಪ್ರವೀಣ್ ಜಯಪಾಲ್ ನಾಯ್ಕ್ (33) ಶಿಕ್ಷೆಗೊಳಗಾದವರು.

ಪಿಯುಸಿ ವಿದ್ಯಾರ್ಥಿನಿಯೊಬ್ಬಳು 2022ರ ಎ.12ರ ಮಧ್ಯಾಹ್ನ 12.45ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹರಿಯಾಣಕ್ಕೆ ಹೋಗುವ ಟಿಕೆಟ್ ಪಡೆಯಲೆಂದು ನಿಂತಿದ್ದಾಗ ಅಲ್ಲಿಗೆ ಬಂದ ಆರೋಪಿಗಳು ಆಕೆಯ ಬಳಿ ತೆರಳಿ ಟಿಕೆಟ್ ಮಾಡಿಸಿಕೊಡುವುದಾಗಿ ಹೇಳಿದ್ದರು. ಬಳಿಕ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆಯುವಂತೆ ನಟಿಸಿ ‘ಇಲ್ಲಿ ಟಿಕೆಟ್ ಸಿಗುವುದಿಲ್ಲ. ಕಾರವಾರದಲ್ಲಿ ಟಿಕೆಟ್ ತೆಗೆಸಿಕೊಡುತ್ತೇವೆ. ಅಲ್ಲಿಗೆ ಹೋಗೋಣ’ ಎಂದು ನಂಬಿಸಿ ಆಕೆಯನ್ನು ರೈಲಿನಲ್ಲಿ ಕಾರವಾರಕ್ಕೆ ಕರೆದೊಯ್ದಿದ್ದರು .

ಬಳಿಕ ಅಂಕೋಲಾದಲ್ಲಿ ಪ್ರವೀಣ್ ಜಯಪಾಲ್ ನಾಯಕ್ ನ ಮನೆಗೆ ಮತ್ತು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಎ.14ರಂದು ಮಂಗಳೂರು ರೈಲು ನಿಲ್ದಾಣಕ್ಕೆ ಕರೆತಂದು ಬಿಟ್ಟಿದ್ದರು. ಬಾಲಕಿಯನ್ನು ಗಮನಿಸಿದ ರೈಲ್ವೆ ಪೊಲೀಸರಿಗೆ ಸಂಶಯ ಬಂದು ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದರು. ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಕೊಟ್ಟಾರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿಎಸ್‌ಸಿ-2 ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಜೂ.12ರಂದು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಪೋಕ್ಸೋ ಕಾಯಿದೆ ಕಲಂ 6ರಂತೆ ಇಬ್ಬರಿಗೂ ತಲಾ 20 ವರ್ಷ ಕಠಿಣ ಸಜೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ವರ್ಷ ಕಠಿಣ ಸಜೆ, ಭಾರತೀಯ ದಂಡ ಸಂಹಿತೆ ಕಲಂ 366ರಡಿ ತಲಾ 10 ವರ್ಷ ಕಠಿಣ ಸಜೆ, 30,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 6 ತಿಂಗಳ ಕಠಿಣ ಸಜೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಅಲ್ಲದೆ ಸಂತ್ರಸ್ತೆಗೆ 5 ಲ.ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಆ ಹಣದಲ್ಲಿ 1 ಲ.ರೂ.ಗಳನ್ನು ತಕ್ಷಣ ಆಕೆಯ ವಿದ್ಯಾಭ್ಯಾಸಕ್ಕೆ ಒದಗಿಸಬೇಕು. ಉಳಿದ ಮೊತ್ತವನ್ನು ಠೇವಣಿಯಾಗಿಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

- Advertisement -
spot_img

Latest News

error: Content is protected !!