ಬೆಂಗಳೂರು: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಜಾಲಿರೈಡ್ ಹೋಗಿ ಕಾರು ಅಪಘಾತ ಪ್ರಕರಣದಲ್ಲಿ ಸಿಲುಕಿರುವ ನಟಿ ಶರ್ಮಿಳಾ ಮಾಂಡ್ರೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾಂಡ್ರೆ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ಅಡಿ ಕೇಸ್ ದಾಖಲಿಸಿಕೊಳ್ಳಲು ನಿರ್ದೇಶಿಸಬೇಕು ಅಂತ ವಕೀಲರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅಡ್ವೊಕೇಟ್ ಗೀತಾ ಮಿಶ್ರಾ, ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಶರ್ಮಿಳಾ ಮಾಂಡ್ರೆ ವಿರುದ್ಧ ಹಲವು ಆರೋಪಗಳನ್ನು ಉಲ್ಲೇಖಿಸಿದ್ದಾರೆ. ಮಾಂಡ್ರೆ ಲಾಕ್ಡೌನ್ ಆದೇಶ ಉಲ್ಲಂಘಿಸಿ ಮಧ್ಯರಾತ್ರಿ ಜಾಲಿರೈಡ್ ನಡೆಸಿದ್ದಾರೆ. ಶನಿವಾರ ಮಧ್ಯರಾತ್ರಿ 3 ಗಂಟೆಗೆ ಪ್ಯಾಲೇಸ್ ರಸ್ತೆಯಲ್ಲಿ ಕಾರ್ ಆಕ್ಸಿಡೆಂಟ್ ಆಗಿದೆ. ಕಾರಿನಲ್ಲಿದ್ದ ನಟಿ ಶರ್ಮಿಳಾ ಮತ್ತು ಪ್ರಭಾವಿ ವ್ಯಕ್ತಿ ಲೋಕೇಶ್ ಗಾಯಗೊಂಡಿದ್ದರು. ಕಾರಿನ ಮೇಲೆ ಪೊಲೀಸ್ರು ನೀಡಿರುವ ಕೋವಿಡ್ -19 ಪಾಸ್ ಅಂಟಿಸಲಾಗಿತ್ತು. ಇದೇ ರೀತಿ ನಗರದಲ್ಲಿ ಅನೇಕ ಕಡೆ ನಿಗದಿತ ಉದ್ದೇಶಕ್ಕೆ ನೀಡಿದ್ದ ಪಾಸ್ಗಳ ದುರ್ಬಳಕೆ ಆಗುತ್ತಿವೆ. ಮಾಂಡ್ರೆ ಸೇರಿದಂತೆ ಅನೇಕ ಮಂದಿ ಪಾಸ್ ದುರ್ಬಳಕೆ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಈ ಕಾಯ್ದೆಯಡಿ ಕೇಸು ದಾಖಲಿಸಲು ನಿರ್ದೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಅಲ್ಲದೇ, ಪೊಲೀಸರ ಬಿಗಿ ಭದ್ರತೆಯ ನಡುವೆಯೂ ಜನರು ಲಾಕ್ಡೌನ್ ಉಲ್ಲಂಘಿಸುತ್ತಿದ್ದಾರೆ. ಅನೇಕ ವಾಹನಗಳು ನಗರದಾದ್ಯಂತ ಇನ್ನೂ ಕೂಡ ಮುಕ್ತವಾಗಿ ಸಂಚರಿಸುತ್ತಿವೆ. ನಗರದಲ್ಲಿ ಪೊಲೀಸ್ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಲಾಕ್ ಡೌನ್ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸು ದಾಖಲಿಸಲು ಆದೇಶಿಸಬೇಕು ಎಂದು ಮಧ್ಯಂತರ ಅರ್ಜಿಯಲ್ಲಿ ಗೀತಾ ಮಿಶ್ರಾ ಕೋರಿದ್ದಾರೆ.