ಸುಳ್ಯ: ಅಪ್ರಾಪ್ತ ಬಾಲಕಿಯೊಬ್ಬಳು ಸ್ನಾನ ಮಾಡುವುದನ್ನು ಯುವಕನೊಬ್ಬ ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದ ಘಟನೆ ಸುಳ್ಯದ ಕಲ್ಮಡ್ಕ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಶ್ಯಾಮ್ ಎಂದು ಗುರುತಿಸಲಾಗಿದ್ದು, ಈತ ಕಲ್ಮಡ್ಕ ಮೂಲದವಾಗಿದ್ದಾನೆ.
ಘಟನೆಯ ವಿವರ:
ಬಾಲಕಿ ಸ್ನಾನ ಮಾಡುತ್ತಿದ್ದಾಗ ಆರೋಪಿ ಶ್ಯಾಮ್ ಎಂಬಾತ ತನ್ನ ಮೊಬೈಲ್ ಮೂಲಕ ಸ್ನಾನದ ದೃಶ್ಯ ಗಳನ್ನು ಸೆರೆಹಿಡಿಯುತ್ತಿದ್ದ ಎನ್ನಲಾಗಿದೆ. ಸ್ನಾನದ ಕೊಠಡಿಯ ಪಕ್ಕ ಕ್ಯಾಮೆರಾ ಇಟ್ಟಿದ್ದ ಶ್ಯಾಮ್ ನನ್ನು ಗಮನಿಸಿದ ಯುವತಿ ಕೂಡಲೇ ಕಿರುಚಿ ತನ್ನ ತಾಯಿಯನ್ನು ಕರೆದಿದ್ದಾಳೆ. ಹಾಗೂ ಶ್ಯಾಮ್ ನಿಂದ ಮೊಬೈಲ್ ನ್ನು ಕಸಿದುಕೊಳ್ಳಲು ಯತ್ನಿಸಿದ್ದಾಳೆ. ಆದರೆ ಬಾಲಕಿಯ ತಾಯಿ ಬರುವ ವೇಳೆಗೆ ಮೊಬೈಲ್ ನೊಂದಿಗೆ ಶ್ಯಾಮ್ ಪರಾರಿಯಾಗಿದ್ದಾನೆ.
ಶ್ಯಾಮ್ ನ ಮುಖ ಪರಿಚಯ ಯುವತಿಯ ಮನೆಯವರಿಗೆ ಇರುವ ಕಾರಣ, ಶ್ಯಾಮ್ ನ ಮನೆಗೆ ತೆರಳಿ ಶ್ಯಾಮ್ ನ ತಂದೆಗೆ ಸ್ನಾನದ ಕೊಠಡಿಯಲ್ಲಿ ಮೊಬೈಲ್ ಇಟ್ಟಿರುವ ಘಟನೆ ಬಗ್ಗೆ ವಿವರಿಸಿದ್ದಾರೆ. ಹಾಗೆಯೆ ಶ್ಯಾಮ್ ಗೆ ಬುದ್ದಿಮಾತು ಹೇಳಿ ಎಂದು ಮನೆಯವರಿಗೆ ತಿಳಿಸಿದ್ದಾರೆ.
ತಾನು ಮೊಬೈಲ್ ಇಟ್ಟಿರುವ ಬಗ್ಗೆ ತನ್ನ ತಂದೆಗೆ ಹೇಳಿದ್ದಕ್ಕೆ ಆರೋಪಿ ಶ್ಯಾಮ್ ಅಪ್ರಾಪ್ತ ಯುವತಿಯ ಮನೆಯವರಿಗೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಬಗ್ಗೆ ಬಾಲಕಿಯ ತಾಯಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಬೆಳ್ಳಾರೆ ಪೊಲೀಸರು ಆರೋಪಿ ಶ್ಯಾಮ್ ನನ್ನು ಬಂಧಿಸಿದ್ದಾರೆ.