ಮಂಗಳೂರು: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಬಡಗುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದ ಕಡಬಾಳ ಉದಯ ಹೆಗಡೆ ಇದೀಗ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.
ಉದಯ ಹೆಗಡೆ ಅವರು ಖ್ಯಾತ ಯಕ್ಷಗಾನ ಕಲಾವಿದೆ ಯಕ್ಷ ಶಿಕ್ಷಕಿಯಾಗಿರುವ ಅಶ್ವಿನಿ ಹೆಗಡೆ ಯವರ ಪತಿ. ಏಪ್ರಿಲ್ 21 ರಂದು ಸಂಜೆ ತನ್ನ ಆಲ್ಟೋ ಕಾರಿನಲ್ಲಿ ಹೋದವರು ಮರಳಿ ಮನೆಗೆ ಬಂದಿಲ್ಲ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಶ್ವಿನಿ ಹೆಗಡೆ ತಿಳಿಸಿದ್ದು, ಬಂಧುಮಿತ್ರರ ಮನೆಯಲ್ಲೂ ಪತಿ ಉದಯ ಹೆಗಡೆ ಬಗ್ಗೆ ಮಾಹಿತಿ ಇಲ್ಲ ಅಲ್ಲದೆ ಮೊಬೈಲ್ ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ತನಿಖೆಗಿಳಿದ ಪೊಲೀಸರು ಉದಯ ಹೆಗಡೆಯವರು ಬೆಂಗಳೂರಿನ ಸಂಬಂಧಿಯ ಮನೆಯಲ್ಲಿ ವಾಸವಿರುವುದು ಪತ್ತೆ ಹಚ್ಚಿದ್ದಾರೆ. ನಾಪತ್ತೆ ಕಾರಣ ಹೆಚ್ಚಿನ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ. ಉದಯ ಹೆಗಡೆ ಅವರು ಪ್ರಸ್ತುತ ಕರಾವಳಿಯ ಹೆಸರಾಂತ ಪೆರ್ಡೂರು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.