
ಬೆಳ್ತಂಗಡಿ: ತಾಲೂಕಿನ ದಿಡುಪೆಯಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಜಲಪಾತದ ಪ್ರವೇಶ ದ್ವಾರದಲ್ಲಿ ಡಿಜಿಟಲ್ ರಶೀದಿ ವಿಚಾರವಾಗಿ ವಾಗ್ವಾದ ನಡೆದು, ಅರಣ್ಯ ಇಲಾಖೆಯ ಗುತ್ತಿಗೆ ವಾಚರ್ ಮೇಲೆ ಹಲ್ಲೆ ನಡೆಸಿ ಹಣ ದೋಚಿದ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆಯ ಗುತ್ತಿಗೆ ವಾಚರ್ ಆಗಿರುವ ಗೋಪಾಲ (42) ಅವರು ದಿಡುಪೆ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ಸಂಗ್ರಹಿಸುವ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧ್ಯಾಹ್ನ ಬಂದ 15 ಯುವಕರ ತಂಡಕ್ಕೆ ಇಲಾಖೆಯ ನಿಯಮದಂತೆ ತಲಾ ₹200ರಂತೆ ಒಟ್ಟು ₹3,000 ನಗದು ಪಡೆದು ಕೈಬರಹದ ರಶೀದಿ ನೀಡಲಾಗಿತ್ತು. ಅಷ್ಟೇ ಅಲ್ಲದೆ, ಪ್ರತಾಪ್ ಬನ್ಮಲ್ ಎಂಬಾತನ ಗುರುತಿನ ಚೀಟಿ ಪಡೆದು ನೋಂದಣಿ ಪುಸ್ತಕದಲ್ಲಿ ದಾಖಲಿಸಿಕೊಂಡು ಅವರಿಗೆ ಜಲಪಾತಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು.
ಆದರೆ, ಜಲಪಾತ ವೀಕ್ಷಿಸಿ ಹಿಂತಿರುಗಿದ ಯುವಕರ ತಂಡವು ಡಿಜಿಟಲ್ ರಶೀದಿಯನ್ನೇ ನೀಡಬೇಕೆಂದು ಪಟ್ಟು ಹಿಡಿಯಿತು. ಆ ಸಮಯದಲ್ಲಿ ಡಿಜಿಟಲ್ ರಶೀದಿ ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗೋಪಾಲ ಅವರು ಸ್ಪಷ್ಟಪಡಿಸಿದರೂ, ಯುವಕರು ತಕರಾರು ಮುಂದುವರಿಸಿ ಅವರ ಮೇಲೆ ವಾಗ್ವಾದ, ಹಲ್ಲೆ ನಡೆಸಿ ಹಣ ದೋಚಿದ್ದಾರೆ ಎಂದು ಆರೋಪಿಸಲಾಗಿದೆ.



