ಮಂಗಳೂರು: ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಮಕ್ಕಳಲ್ಲಿ ವೈರಲ್ ಜ್ವರ ಕಾಣಿಸಿಕೊಳ್ಳುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಬಿಟ್ಟುಬಿಟ್ಟು ಮಳೆಯಾಗುತ್ತಿರುವುದು ಮತ್ತು ಹವಾಮಾನ ವೈಪರೀತ್ಯದ ಪರಿಣಾಮ ಮಕ್ಕಳಲ್ಲಿ ಶೀತ, ಜ್ವರ ಕಂಡುಬರುವ ಸಾಧ್ಯತೆ ಇರುತ್ತದೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ಮಕ್ಕಳಲ್ಲಿ ಜ್ವರಕ್ಕೆ ತುತ್ತಾದವರ ಸಂಖ್ಯೆ ಕಡಿಮೆ.
ಹವಾಮಾನ ವೈಪರಿತ್ಯದ ಪರಿಣಾಮ ವೈರಲ್ ಜ್ವರ ಹೆಚ್ಚಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಕೊರೊನಾ ಭೀತಿಯೂ ಇರುವುದರಿಂದ ಯಾವುದೇ ಜ್ವರವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಮಕ್ಕಳು ಸೇರಿದಂತೆ ಯಾರಲ್ಲೇ ಆದರೂ ಜ್ವರ ಕಾಣಿಸಿಕೊಂಡರೆ ಅವರಿಗೆ ಕೊರೊನಾ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ವೈದ್ಯರು ಸಲಹೆ ನೀಡಬೇಕು. ಜಿಲ್ಲೆಯಲ್ಲಿ ಸದ್ಯ ಹೆಚ್ಚಿನ ಭೀತಿ ಇಲ್ಲದಿದ್ದರೂ ಜ್ವರ ಇದ್ದರೆ ತಪಾಸಣೆ ನಡೆಸಿ’ ಅಂತ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಹೇಳಿದರು.
ಮುನ್ನೆಚ್ಚರಿಕೆ ಇರಲಿ:
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ಪ್ರತಿಕ್ರಿಯಿಸಿ, “ಜಿಲ್ಲೆಯಲ್ಲಿ ಮಕ್ಕಳಲ್ಲಿ ಜ್ವರಕ್ಕೆ ತುತ್ತಾದವರು ಕಡಿಮೆ. ಕಳೆದ ವರ್ಷ ಜಿಲ್ಲೆಯಲ್ಲಿ ಈ ಸಮಯ ಕೊರೊನಾ ತೀವ್ರತೆ ಹೆಚ್ಚಿತ್ತು. ಮಕ್ಕಳಲ್ಲಿ ಜ್ವರ ಇದ್ದರೆ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ಕರೆದುಕೊಂಡು ಬರುತ್ತಿರಲಿಲ್ಲ. ಆದರೆ ಸದ್ಯ ಕೊರೊನಾ ತೀವ್ರತೆಯೂ ಕಡಿಮೆಯಾಗುತ್ತಿದೆ. ವೈರಲ್ ಜ್ವರ ಕಡಿಮೆಯಾಗದಿದ್ದರೆ ಮಾತ್ರ ನಾಲ್ಕೈದು ದಿನಗಳ ಬಳಿಕ ಬ್ಯಾಕ್ಟೀರಿಯಾ ಸೋಂಕಿಗೆ ತಿರುಗುತ್ತದೆ. ಬಳಿಕ ನ್ಯುಮೋನಿಯಾವಾಗಿ ಪರಿವರ್ತನೆಯಾಗುತ್ತದೆ. ಆದರೆ ಜ್ವರ ಬಂದಾಕ್ಷಣ ವೈದ್ಯರ ಸಲಹೆಯಂತೆ ಔಷಧ ಪಡೆದುಕೊಂಡರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ’ ಎಂದಿದ್ದಾರೆ.