ಹೈದರಾಬಾದ್: ನಟ ವಿಷ್ಣುವರ್ಧನ್ ಬಗ್ಗೆ ಸಂದರ್ಶನವೊಂದರಲ್ಲಿ ಕೀಳಾಗಿ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ಗೆ ಕೊನೆಗೂ ಕ್ಷಮೆ ಕೇಳಿದ್ದಾರೆ. ವಿಜಯ್ ರಂಗರಾಜು, ಕಳೆದ ತಿಂಗಳು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಕನ್ನಡ ಖ್ಯಾತ ನಟ ವಿಷ್ಣುವರ್ಧನ್ ಬಗ್ಗೆ ಇಲ್ಲ ಸಲ್ಲದ್ದು ಹೇಳಿ ಅವಮಾನಕಾರಿಯಾಗಿ ಮಾತನಾಡಿದ್ದರು. ಇದು ಕನ್ನಡಿಗರನ್ನು ಅತಿಯಾಗಿ ಕೆರಳಿಸಿತ್ತು.
ಇದೀಗ ವಿಜಯ್ ರಂಗರಾಜು ವಿಡಿಯೋ ಸಂದೇಶವೊಂದನ್ನು ನೀಡಿದ್ದು, ‘ನನಗೆ ನನ್ನ ತಪ್ಪಿನ ಅರಿವಾಗಿದೆ, ನನ್ನ ತಪ್ಪಿಗೆ ಶಿಕ್ಷೆಯನ್ನೂ ಅನುಭವಿಸುತ್ತಿದ್ದೇನೆ, ನನಗೆ ಕೊರೊನಾ ಬಂದಿದೆ. ನಾನು ವಿಷ್ಣುವರ್ಧನ್ ಬಗ್ಗೆ ಹಾಗೆ ಮಾತನಾಡಬಾರದಿತ್ತು, ನನ್ನನ್ನು ಕ್ಷಮಿಸಿಬಿಡಿ’ ಎಂದು ಅಂಗಲಾಚಿದ್ದಾರೆ.
ನಾನು ವಿಷ್ಣುವರ್ಧನ್ ಬಗ್ಗೆ ಹೇಳಿದ್ದು, ಸುಳ್ಳು, ಅವರು ತೀರಿಕೊಳ್ಳುವ ಕೆಲ ತಿಂಗಳುಗಳ ಮೊದಲು ನನಗೆ ನೀಡಿದ್ದ ಒಂದು ಪಾತ್ರವನ್ನು ಬೇರೆಯವರಿಗೆ ಕೊಡಿಸಿದ್ದರು, ಆ ಕೋಪದಲ್ಲಿ ನಾನು ಬಾಯಿಗೆ ಬಂದಂತೆ ಮಾತನಾಡಿಬಿಟ್ಟೆ. ನಾನು ಸಂದರ್ಶನದಲ್ಲಿ ಹೇಳಿರುವಂತೆ ನಾನೇನಾದರೂ ಸೆಟ್‌ನಲ್ಲಿ ಅವರೊಂದಿಗೆ ವರ್ತಿಸಿದ್ದಿದ್ದರೆ, ಯೂನಿಟ್‌ನವರೇ ನನ್ನನ್ನು ಸಾಯಿಸಿಬಿಡುತ್ತಿದ್ದರು, ನಾನು ವಿಷ್ಣು ಅವರ ಬಗ್ಗೆ ಹೇಳಿದ್ದು ತಪ್ಪು, ಸುಳ್ಳು, ನನ್ನನ್ನು ಕ್ಷಮಿಸಿ ಬಿಡಿ ಎಂದು ಮಂಡಿಯೂರಿ ನೆಲಕ್ಕೆ ತಲೆ ತಾಗಿಸಿ ಅತ್ತಿದ್ದಾರೆ ವಿಜಯ್ ರಂಗರಾಜು.
ನಾನು, ಸುದೀಪ್, ರಾಜ್‌ಕುಮಾರ್ ಪುತ್ರ ಪುನೀತ್ ರಾಜ್‌ಕುಮಾರ್, ಉಪೇಂದ್ರ ಎಲ್ಲರ ಬಳಿ ಕ್ಷಮೆ ಕೇಳಿಕೊಳ್ಳುತ್ತೇನೆ. ಭಾರತಿ ಅಮ್ಮನವರ ಕಾಲು ಹಿಡಿದುಕೊಳ್ಳುತ್ತೇನೆ. ವಿಷ್ಣುವರ್ಧನ್ ಅಭಿಮಾನಿಗಳ ಬಳಿ ನಾನು ಕ್ಷಮೆ ಕೇಳುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ ವಿಜಯ್ ರಂಗರಾಜು.
ನಾನೇನು ದೊಡ್ಡ ನಟನಲ್ಲ, ಕೆಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ನಾನು ಫೈಟರ್ ಆಗಿ ಅಷ್ಟೆ ಸಿನಿಮಾಕ್ಕೆ ಬಂದಿದ್ದೇನೆ. ಕೆಲವು ವ್ಯಾಪಾರಗಳನ್ನು ಮಾಡಿಕೊಂಡಿದ್ದೆ. ಕೆಲವು ವರ್ಷಗಳ ಲಂಡನ್‌ನಲ್ಲಿ ನೆಲೆಸಿದ್ದೆ. ಅಲ್ಲಿ ಶೌಚಾಲಯಗಳನ್ನು ಸ್ವಚ್ಛ ಮಾಡಿದ್ದೆ, ರಸ್ತೆ ಗುಡಿಸಿದ್ದೆ, ನನಗೆ ದೊಡ್ಡ ಯೋಗ್ಯತೆ ಇಲ್ಲ, ಆ ದೊಡ್ಡ ಮನುಷ್ಯ ವಿಷ್ಣುವರ್ಧನ್ ಬಗ್ಗೆ ಅಹಂಕಾರದಲ್ಲಿ ಹಾಗೆ ಮಾತನಾಡಿಬಿಟ್ಟೆ ಎಂದಿದ್ದಾರೆ ವಿಜಯ್ ರಂಗರಾಜು.