
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಅಹವಾಲು ಆಲಿಸಲು ತೆರಳಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಜುಗರ ಎದುರಾದ ಘಟನೆ ನಡೆದಿದೆ.
ಪ್ರತಿಭಟನಾ ಸ್ಥಳದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಸಂಕಷ್ಟಗಳನ್ನು ವಿವರಿಸುತ್ತಾ ಕಣ್ಣೀರಿಟ್ಟರು. “ಗಂಡ ಇಲ್ಲ, ಮಕ್ಕಳಿಲ್ಲ. ಕೇವಲ 5 ಸಾವಿರ ರೂಪಾಯಿ ಗೌರವಧನದಲ್ಲಿ ಜೀವನ ನಡೆಸುವುದು ಹೇಗೆ?” ಎಂದು ಮಹಿಳೆಯೊಬ್ಬರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಅಲ್ಪ ಗೌರವಧನದಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಎಷ್ಟು ಕಷ್ಟ ಎಂಬುದನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಶೌಚಾಲಯ ವ್ಯವಸ್ಥೆಯ ಕುರಿತು ನಾಗಲಕ್ಷ್ಮಿ ಚೌಧರಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವತಿಯಿಂದ ಪ್ರತಿಭಟನಾ ಸ್ಥಳದಲ್ಲಿ 15 ಶೌಚಾಲಯಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದರು. ಆದರೆ, “ನಾವೇ ನಮ್ಮ ಹಣ ಖರ್ಚು ಮಾಡಿ ಶೌಚಾಲಯದ ವ್ಯವಸ್ಥೆ ಮಾಡಿಕೊಂಡಿದ್ದೇವೆ” ಎಂದು ಆಶಾ ಕಾರ್ಯಕರ್ತೆಯರು ಆಕ್ಷೇಪ ವ್ಯಕ್ತಪಡಿಸಿದರು.
ಇದರಿಂದ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ವಾಗ್ವಾದ ನಡೆಯಿತು. ಜಿಬಿಎ ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಯ ಆಧಾರದ ಮೇಲೆ ಹೇಳಿಕೆ ನೀಡಿದ್ದೀರಾ? ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸದೆ ಮಾತನಾಡಿದ್ದು ಸರಿಯೇ? ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗದೆ ನಾಗಲಕ್ಷ್ಮಿ ಚೌಧರಿ ತಬ್ಬಿಬ್ಬಾದರು.
ಇದೇ ವೇಳೆ ಸ್ಯಾನಿಟರಿ ಪ್ಯಾಡ್, ಆರೋಗ್ಯ ಸೇವೆ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ ಎಂದು ಅವರು ಸಮರ್ಥಿಸಿಕೊಂಡರು. ಆದರೆ, ಕಳೆದ ಮೂರು ದಿನಗಳಿಂದ ಯಾವುದೇ ಸಮರ್ಪಕ ಸೌಲಭ್ಯ ದೊರೆತಿಲ್ಲ. ವ್ಯವಸ್ಥೆ ಮಾಡಿದ್ದರೆ ಸ್ಥಳದಲ್ಲೇ ತೋರಿಸಿ ಎಂದು ಆಶಾ ಕಾರ್ಯಕರ್ತೆಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸವಾಲು ಹಾಕಿದರು.
ಆಶಾ ಕಾರ್ಯಕರ್ತೆಯರ ಗೌರವಧನ ಹಾಗೂ ಮೂಲಭೂತ ಸೌಲಭ್ಯಗಳ ಬೇಡಿಕೆಗಳನ್ನು ಆಲಿಸುವ ಉದ್ದೇಶದಿಂದ ನಡೆದ ಭೇಟಿಯು ಶೌಚಾಲಯ ವ್ಯವಸ್ಥೆಯ ಕುರಿತ ಹೇಳಿಕೆಯಿಂದಾಗಿ ವಿವಾದಕ್ಕೆ ತಿರುಗಿತು. ಪ್ರತಿಭಟನಾ ಸ್ಥಳದ ವಾಸ್ತವ ಸ್ಥಿತಿಯನ್ನು ಪರಿಶೀಲಿಸದೆ ಹೇಳಿಕೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಮಹಿಳಾ ಆಯೋಗದ ಅಧ್ಯಕ್ಷರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಜುಗರ ಅನುಭವಿಸಿದರು.


