ಉಡುಪಿಯ ಯುವತಿಯೊಬ್ಬಳು ವೀಡಿಯೋ ಕಾಲ್ ಮೂಲಕ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್ ಹಾಗೂ ಉಡುಪಿ ಮೂಲದ ಮೇಘನಾ ಅವರು ಆನ್‌ಲೈನ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಮವಾರ ಉಡುಪಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ವರನ ಅನುಪಸ್ಥಿತಿಯಲ್ಲಿ ಎರಡೂ ಕುಟುಂಬಗಳು ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ನೆರವೇರಿಸಿವೆ.
ಕೆನಡಾದಲ್ಲಿ ಉದ್ಯೋಗದಲ್ಲಿರುವ ಸುಹಾಸ್ ಅವರಿಗೆ ಭಾರತಕ್ಕೆ ಬರಲು ರಜೆ ಸಿಗದ ಕಾರಣ ನಿಶ್ಚಿತಾರ್ಥಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಈಗಾಗಲೇ ಜನವರಿ 7 ಮತ್ತು 8ರಂದು ಮದುವೆ ದಿನಾಂಕ ನಿಗದಿಯಾಗಿರುವುದರಿಂದ, ಕುಟುಂಬಗಳು ಆನ್‌ಲೈನ್ ನಿಶ್ಚಿತಾರ್ಥಕ್ಕೆ ನಿರ್ಧರಿಸಿವೆ.
ವೀಡಿಯೋ ಕಾಲ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ, ಬ್ರಾಹ್ಮಣ ಸಂಪ್ರದಾಯದಂತೆ ಪೂಜೆ ನೆರವೇರಿಸಿ, ಎಲ್‌ಇಡಿ ಪರದೆಯ ಮುಂದೆ ಆರತಿ ಬೆಳಗಿ ಮಂತ್ರಾಕ್ಷತೆ ಹಾಕಿ ವಧು–ವರರಿಗೆ ಹಿರಿಯರು ಆಶೀರ್ವಾದ ಮಾಡಿದ್ದಾರೆ. ಕ್ಯಾಮೆರಾ ಎದುರಲ್ಲೇ ಇಬ್ಬರೂ ಪರಸ್ಪರ ಉಂಗುರ ಧರಿಸಿ ನಿಶ್ಚಿತಾರ್ಥ ಮಾಡಿಕೊಂಡರು.


