ಉಡುಪಿ: ಜಿಲ್ಲೆಯ ಮೂವರು ಕೋವಿಡ್-19 ಸೋಂಕಿತರು ಗುಣಮುಖರಾಗಿದ್ದು ಶೀಘ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಸೋಂಕಿತರ ಜತೆಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ. ಅವರ ವೈದ್ಯಕೀಯ ಪರೀಕ್ಷಾ ವರದಿ ಕೂಡ ನೆಗೆಟಿವ್ ಬಂದಿರುವುದರಿಂದ ದೊಡ್ಡ ಆತಂಕ ದೂರವಾಗಿದೆ ಎಂದರು.
ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆಗಳು ತೀರಾ ಕಡಿಮೆ ಇದೆ. ಆದರೂ, ಹೊರ ಜಿಲ್ಲೆ ಹಾಗೂ ರಾಜ್ಯಗಳ ಜನರಿಂದ ಹರಡುವ ಸಾಧ್ಯತೆಗಳಿರುವುದರಿಂದ ಉಡುಪಿ ಜಿಲ್ಲೆಯ ಎಲ್ಲ ಗಡಿಗಳನ್ನು ಸೀಲ್ ಮಾಡಲಾಗಿದೆ.
ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಬರುವವರನ್ನು ಜಿಲ್ಲೆಯ ಗಡಿಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಯಾರೂ ಉಡುಪಿಗೆ ಬರುವ ವ್ಯರ್ಥ ಪ್ರಯತ್ನ ಮಾಡಬೇಡಿ. ಹಾಗೆಯೇ, ಉಡುಪಿ ಜಿಲ್ಲೆಯವರು ಹೊರ ಜಿಲ್ಲೆ ಅಥವಾ ರಾಜ್ಯಗಳಿಗೆ ತೆರಳುವಂತೆಯೂ ಇಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ನಿರಾಳ: ಮೂವರು ಸೋಂಕಿತರು ಗುಣಮುಖರಾಗಿರುವುದರಿಂದ ಸಾರ್ವಜನಿಕರು ಸದ್ಯಕ್ಕೆ ಕೊರೊನಾ ಆತಂಕ ದೂರವಾದಂತಾಗಿದೆ. ವಿದೇಶಗಳಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ಬಹುತೇಕರು 14 ದಿನಗಳ ಅವಧಿಯನ್ನು ಪೂರೈಸಿದ್ದು, ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ.
ಜತೆಗೆ, ಮುಂಬೈ ಸೇರಿದಂತೆ ಮಹಾನಗರಗಳಿಂದ ಉಡುಪಿಗೆ ಬಂದಿದ್ದವರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.