ಉಡುಪಿ; ನಿಂತಿದ್ದ ಇನೋವಾ ಕಾರಿಗೆ ಖಾಸಗಿ ಬಸ್ ಢಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ನಡೆದಿದೆ.
ಭಟ್ಕಳ ಮೂಸ ನಗರದ ನಿವಾಸಿ ಮೊಹಮ್ಮದ್ ನಾಸಿರ್ ಸಿದ್ದೀಕ್ವಾ ಮೃತ ದುರ್ದೈವಿ. ನಾಸಿರ್ ಅವರು ಕುಟುಂಬದವರೊಂದಿಗೆ ಮಂಗಳೂರಿನಿಂದ ಭಟ್ಕಳದ ಮನೆಗೆ ಮರಳುತ್ತಿದ್ದ ವೇಳೆ ರಾತ್ರಿ 8:45 ರ ಸುಮಾರಿಗೆ ಅರಾಟೆ ಸೇತುವೆ ಬಳಿ ಬರುತ್ತಿದ್ದಾಗ ವಾಹನದಿಂದ ಅಸ್ವಾಭಾವಿಕ ಶಬ್ಧ ಕೇಳಿ ಬಂದ ಕಾರಣ ಕಾರನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ರಸ್ತೆ ಬದಿ ವಾಹನ ನಿಲ್ಲಿಸಿ ಸಮಸ್ಯೆ ಪರಿಶೀಲಿಸಲು ಮುಂದಾಗಿದ್ದಾರೆ. ಮತ್ತೆ ಅವರು ಕಾರನ್ನು ಹತ್ತಲು ಹೋದಾಗ ಅದೇ ಮಾರ್ಗದಲ್ಲಿ ಕುಂದಾಪುರದಿಂದ ಗಂಗೊಳ್ಳಿಗೆ ತೆರಳುತ್ತಿದ್ದ ಖಾಸಗಿ ಬಸ್ ಕಾರಿನ ಡೊರಿಗೆ ಡಿಕ್ಕಿ ಹೊಡೆದಿದ್ದು ನಾಸಿರ್ ಗಂಭೀರ ಗಾಯಗೊಂಡಿದ್ದರು. ತಕ್ಷಣ ನಾಸಿರ್ ಅವರನ್ನು ಇಬ್ರಾಹಿಂ ಗಂಗೊಳ್ಳಿ ಅವರು ಆಂಬ್ಯುಲೆನ್ಸ್ ನಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ರೂ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು.
ನಾಸಿರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.