ರಾಮನಗರ: ಅವರಿಬ್ಬರೂ ಮೊದಲೇ ಪ್ರೀತಿಸಿದ್ದರು. ಆದರೆ, ಜಾತಿ ಬೇರೆಯಾಗಿದ್ದ ಕಾರಣ ಮದುವೆಗೆ ಎರಡು ಮನೆಯವರು ಒಪ್ಪಿಗೆ ನೀಡಿರಲಿಲ್ಲ. ಕಳೆದ ವರ್ಷ ಮನೆಯವರ ಬಲವಂತಕ್ಕೆ ಯುವತಿ ಬೇರೆ ಮದುವೆಯಾಗಿದ್ದಾಳೆ. ಆದರೆ ದುರಾದೃಷ್ಟವೆನ್ನುವಂತೆ ಆಕೆಯ ಪತಿ ಮೃತಪಟ್ಟಿದ್ದಾರೆ.
ಮಾಜಿ ಗೆಳತಿ ವಿಧವೆಯಾಗಿದ್ದನ್ನು ತಿಳಿದ ಪ್ರಿಯಕರ ತಾನೇ ಮದುವೆಯಾಗಲು ಮುಂದೆ ಬಂದಿದ್ದಾನೆ. ಆಗಲೂ ಎರಡು ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಧವೆಯಾದ ಪ್ರಿಯತಮೆಯನ್ನು ಮದುವೆಯಾಗಲು ಮುಂದಾದ ಪ್ರಿಯಕರ ಪೊಲೀಸರ ಮೊರೆ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಮನಗರ ಜಿಲ್ಲೆ ಸಾತನೂರು ತಾಲೂಕಿನ ಉಯ್ಯಂಬಳ್ಳಿ ಹೋಬಳಿ ತಾವರಕಟ್ಟೆ ಗ್ರಾಮದ ಪವನ್ ಮತ್ತು ಮಾರಗಯ್ಯಗುಂಡಿ ಗ್ರಾಮದ ಶ್ರುತಿ ಸಾತನೂರು ಪೊಲೀಸ್ ಠಾಣೆಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ಹಿಂದಿನಿಂದಲೂ ಪರಸ್ಪರ ಪ್ರೀತಿಸಿದ್ದ ಇವರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಶ್ರುತಿ ಬೇರೆ ಯುವಕನೊಂದಿಗೆ ಮದುವೆಯಾಗಿದ್ದು ಅವರ ಪತಿ ಕೆಲವು ದಿನಗಳ ಹಿಂದೆ ನಿಧನರಾಗಿದ್ದಾರೆ. ವಿಧವೆಯಾದ ಶ್ರುತಿಯನ್ನು ಮದುವೆಯಾಗಲು ಪವನ್ ತೀರ್ಮಾನಿಸಿ ಮನೆಯಲ್ಲಿ ವಿಷಯ ತಿಳಿಸಿದ್ದಾರೆ. ಎರಡೂ ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ ಇವರು ಪೊಲೀಸರ ನೆರವು ಪಡೆದು ಮದುವೆಯಾಗಿದ್ದಾರೆ. ಇವರ ಮದುವೆಗೆ ಸಾತನೂರು ಠಾಣೆ ಸಬ್ ಇನ್ಸ್ ಪೆಕ್ಟರ್ ಮುರಳಿ ಸಾಥ್ ನೀಡಿದ್ದಾರೆ. ಲಾಕ್ ಡೌನ್ ನಿಯಮಾನುಸಾರ ಅಂತರ ಕಾಯ್ದುಕೊಂಡು ಮದುವೆ ನೆರವೇರಿದ್ದು ಅವರ ಪ್ರೀತಿ ಮತ್ತು ಪೊಲೀಸರ ಮಾನವೀಯ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.