Friday, July 31, 2026
Homeಕರಾವಳಿಮಂಗಳೂರುಮಂಗಳೂರು: ತೋಟ ಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು...

ಮಂಗಳೂರು: ತೋಟ ಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

- Advertisement -
- Advertisement -

ಮಂಗಳೂರು: 2018ರಲ್ಲಿ ನಗರದ ಪಣಂಬೂರು ತೋಟ ಬೆಂಗ್ರೆ ಬೀಚ್‌ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಜ್ವಲ್ ಅಲಿಯಾಸ್ ಪಜ್ಜು, ಅರುಣ್ ಅಮೀನ್, ಆದಿತ್ಯ ಸಾಲಿಯಾನ್ ಹಾಗೂ ಅಬ್ದುಲ್ ರಿಯಾಝ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ನ್ಯಾಯಾಧೀಶರಾದ ಶ್ರೀ ಜಗದೀಶ್ ವಿ.ಎನ್. ರವರು ಈ ಮಹತ್ವದ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಪ್ರಕರಣದ ಹಿನ್ನೆಲೆ: 2018ರ ನವೆಂಬರ್ 17ರಂದು ಸಂತ್ರಸ್ತ ಯುವತಿ ತನ್ನ ಸ್ನೇಹಿತನೊಂದಿಗೆ ತೋಟ ಬೆಂಗ್ರೆ ಬೀಚ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಗ, ಬಂದು ಗಲಾಟೆ ಮಾಡಿದ್ದ ಏಳು ಮಂದಿ ಅಪರಿಚಿತರ ತಂಡ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಯುವತಿಯ ಮೇಲೆ ಬಲವಂತವಾಗಿ ಸಾಮೂಹಿಕ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿತ್ತು. ಬಳಿಕ ಬೆದರಿಕೆಗೆ ಹೆದರಿದ್ದ ಯುವತಿ, ದಿನಾಂಕ 19ರಂದು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದಲ್ಲಿದ್ದ ಒಟ್ಟು 7 ಆರೋಪಿಗಳ ಪೈಕಿ ಮೂವರು ಮೈನರ್‌ಗಳಾಗಿದ್ದು, ಅವರನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿತ್ತು.

ತನಿಖೆ ಮತ್ತು ವಾದ: ಆಗಿನ ಐಪಿಎಸ್ ಅಧಿಕಾರಿ ಶ್ರೀನಿವಾಸ ಗೌಡ ಅವರು ಸುದೀರ್ಘ ತನಿಖೆ ನಡೆಸಿ, ಪ್ರಬಲ ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

ಶಿಕ್ಷೆಯ ವಿವರ: ಆರೋಪಿಗಳ ವಿರುದ್ಧ ಅತ್ಯಾಚಾರ, ಹಲ್ಲೆ, ಜೀವ ಬೆದರಿಕೆ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ:

  • ಕಲಂ 376(ಡಿ) (ಸಾಮೂಹಿಕ ಅತ್ಯಾಚಾರ): ತಲಾ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ.
  • ಇತರ ಕಲಂಗಳು: ಕಲಂ 354, 506, 323 ಹಾಗೂ 341 ರ ಅಡಿಯಲ್ಲಿ ಹೆಚ್ಚುವರಿಯಾಗಿ ಸಾದಾ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.

ಇದಲ್ಲದೆ, ಸಂತ್ರಸ್ತ ಯುವತಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ವತಿಯಿಂದ ₹60,000 ಪರಿಹಾರ ಮಂಜೂರು ಮಾಡಲಾಗಿದೆ.

- Advertisement -

Latest News

error: Content is protected !!