ಬಿಜೆಪಿ ಸಂಸದೆ ನಟಿ ಕಂಗನಾ ರಣಾವತ್, ತಮ್ಮನ್ನು ಭೇಟಿಯಾಗಲು ಬರುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು ಎನ್ನುವಂತಹ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ನನ್ನನ್ನು ಮಂಡಿ ಲೋಕಸಭಾ ಕ್ಷೇತ್ರದ ಜನರು ಭೇಟಿಯಾಗಲು ಬಯಸಿದರೆ, ಅವರು ಆಧಾರ್ ಕಾರ್ಡ್ ತಂದರೆ ಒಳಿತು. ಏಕೆಂದರೆ ಇದರಿಂದ ಅವರು ನನ್ನ ಕ್ಷೇತ್ರದವರೇ ಅಥವಾ ಬೇರೆ ಕ್ಷೇತ್ರದವರೇ ಎಂಬುವನ್ನು ಪತ್ತೆ ಹಚ್ಚಬಹುದು ಎಂದು ಕಂಗನಾ ಹೇಳಿದ್ದಾರೆ.
ಇನ್ನು ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕವಾಗಿದ್ದು, ಇದರಿಂದ ನೀವು ಯಾವುದೇ ಅನಾನುಕೂಲತೆಯನ್ನು ಎದುರಿಸುವುದಿಲ್ಲ. ಮೇಲಿನ ಹಿಮಾಚಲ ಪ್ರದೇಶದವರಾಗಿದ್ದರೆ ನಮ್ಮ ಕುಲು ಮನಾಲಿ ಮನೆಗೆ, ಮಂಡಿಯವರಾಗಿದ್ದರೆ ಮಂಡಿ ಕಚೇರಿಗೆ, ಹಿಮಾಚಲದ ಕೆಳಗಿನವರಾಗಿದ್ದರೆ ಸದಾ ಘಾಟ್‌ನಲ್ಲಿರುವ ನನ್ನ ಕಚೇರಿಗೆ ಬನ್ನಿ. ಕೆಲಸದ ವಿಚಾರವಾಗಿ ಯಾರನ್ನಾದರೂ ಖುದ್ದಾಗಿ ಭೇಟಿಯಾದರೆ ತುಂಬಾ ಒಳ್ಳೆಯದು. ಅಷ್ಟೇಅಲ್ಲದೆ ಜನರು ತಮ್ಮ ಸಮಸ್ಯೆಗಳನ್ನು ಅಂಚೆ ಮೂಲಕವೂ ಹೇಳಬಹುದು ಎಂದು ಕಂಗನಾ ತಿಳಿಸಿದ್ದರು.
ಇನ್ನು ಕಂಗನಾ ನೀಡಿರುವ ಹೇಳಿಕೆಗೆ ಪ್ರತಿಕ್ರಯಿಸಿರುವ ಸಚಿವ ವಿಕ್ರಮಾದಿತ್ಯ ಸಿಂಗ್, “ಸ್ವಂತ ರಾಜ್ಯದವರೇ ಆಗಿರಲಿ, ಪ್ರವಾಸಿಗರೇ ಇರಲಿ, ಸಾರ್ವಜನಿಕ ಪ್ರತಿನಿಧಿಗಳು ಎಲ್ಲರನ್ನೂ ಭೇಟಿಯಾಗಬೇಕು,” ಎಂದು ವಾಗ್ದಾಳಿ ನಡೆಸಿದ್ದಾರೆ.