Saturday, April 20, 2024
Homeಕರಾವಳಿಉಡುಪಿಬೈಂದೂರಿನಲ್ಲಿ ಮನೆಗಳಿಗೆ ಜಲದಿಗ್ಬಂಧನ: ದೋಣಿಯೇ ಸಂಪರ್ಕ ಸಾಧನ: ನದಿಪಾತ್ರದ ಜನರ ಬದುಕು ದುರ್ಬರ

ಬೈಂದೂರಿನಲ್ಲಿ ಮನೆಗಳಿಗೆ ಜಲದಿಗ್ಬಂಧನ: ದೋಣಿಯೇ ಸಂಪರ್ಕ ಸಾಧನ: ನದಿಪಾತ್ರದ ಜನರ ಬದುಕು ದುರ್ಬರ

spot_img
- Advertisement -
- Advertisement -

ಬೈಂದೂರು: ತಾಲೂಕಿನ ಸೌಪರ್ಣಿಕಾ ನದಿಪಾತ್ರದ ನಾವುಂದ ಗ್ರಾಮದ ಸಾಲ್ಬುಡ, ಬಡಾಕೆರೆ, ಹಡವು, ನಾಡಾ ಗ್ರಾಮದ ಪಡುಕೋಣೆ ಮತ್ತು ಮರವಂತೆಯಲ್ಲಿ ಆರಿದ್ರಾ ಮಳೆಯ ಅಬ್ಬರಕ್ಕೆ ನಲುಗಿದ ಜನತೆ ಪುನರ್ವಸು ಮಳೆಯಲ್ಲಾದರೂ ಕೊಂಚ ನೆಮ್ಮದಿ ಪಡೆಯುವ ಆಶಾವಾದಕ್ಕೆ ಕಲ್ಲುಬಿದ್ದಿದೆ. ಕಳೆದ 15 ದಿನಗಳಿಂದ ತಗ್ಗದ ನೆರೆ ನೀರಿನಿಂದಾಗಿ ಇಲ್ಲಿಯ ಜನರ ಬದುಕು ದುರ್ಬರ ಆಗಿದೆ. ಎಳೆಯ ಮಕ್ಕಳ ಶೈಕ್ಷಣಿಕ ಬದುಕಿಗೆ, ದೈನಂದಿನ ದುಡಿಮೆಗೆ, ಹಿರಿಯ ನಾಗರಿಕರ ಜೀವಕ್ಕೆ ಅಪಾಯ ಎದುರಾಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆ ಪರಿಣಾಮ ಜಲದಿಗ್ಬಂಧನದ ದಿಸೆಯಿಂದಾಗಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಪ್ರತಿದಿನ ಶಾಲಾ ಮಕ್ಕಳು ದೋಣಿ ಮೂಲಕವೇ 2-3 ಕಿ.ಮೀ. ಕ್ರಮಿಸಬೇಕಾಗಿದೆ. ಜಾನುವಾರುಗಳ ರಕ್ಷಣೆಯೇ ಸಾಹಸ ಎಂಬಂತಾಗಿದೆ. ಕೃಷಿ ಭೂಮಿಗಳು ಸಂಪೂರ್ಣ ಜಲಾವೃತಗೊಂಡಿದ್ದು ಮುಂಗಾರು ಕೃಷಿಗೆ ಮನಸ್ಸು ಮಾಡದ ಪರಿಸ್ಥಿತಿ ಎದುರಾಗಿದೆ. ಈಗಲೇ ಬಿತ್ತಿದ ಬೀಜಗಳು ತೊಳೆದು ಹೋಗಿದ್ದರೆ ನಾಟಿಯಾದ ಗದ್ದೆಯಲ್ಲಿನ ಸಸಿಗಳು ಕೊಳೆತುಹೋಗಿವೆ.

ಸತತವಾಗಿ ಸುರಿಯುತ್ತಿರುವ ಮಳೆ, ಮೂರ್ನಾಲ್ಕು ವಾರಗಳಿಂದ ನೀರಿನಲ್ಲಿ ಬಂಧಿಯಾಗಿರುವ ಸನ್ನಿವೇಶದಲ್ಲಿ ಕಾಲ ಕಳೆಯುತ್ತಿರುವ ನದಿಪಾತ್ರದ ಜನತೆ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ. ಜ್ವರಶೀತ ಬಾಧೆಗೂ ಚಿಕಿತ್ಸೆ ಪಡೆದುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹಸುಗೂಸುಗಳು, ಪುಟಾಣಿ ಮಕ್ಕಳು, ಹಿರಿಯ ನಾಗರಿಕರು ಅನಾರೋಗ್ಯದಿಂದ ಕಂಗೆಡುವಂತಾಗಿದೆ. ಮನೆಯಿಂದ ಹೊರಬೀಳಬೇಕಾದರೆ ದೋಣಿಯೇ ಗತಿ ಆಗಿದ್ದು ದಿಕ್ಕುತೋಚದ ಪರಿಸ್ಥಿತಿ ಆವರಿಸಿಕೊಂಡಿದೆ.

ಇಲ್ಲಿನವರಿಗೆ ಕಳೆದ 15 ದಿನಗಳಿಂದ ದುಡಿಮೆ ಇಲ್ಲದೆ ಮನೆಗಳ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಮನೆಗಳಲ್ಲಿ ದಿನಸಿಯೂ ಇಲ್ಲ. ಪೇಪರ್‌, ಹಾಲು, ಅಡುಗೆ ಅನಿಲ ಸಿಲಿಂಡರ್‌ ವಿತರಕರು ಮನೆ ಬಾಗಿಲಿಗೆ ಬಾರದ ಪರಿಸ್ಥಿತಿ ಇದೆ. ವಿದ್ಯುತ್‌, ದೂರವಾಣಿ ಸಹ ಕೈಕೊಟ್ಟಿದೆ. ಊರಿನ ಯುವಕರ ತಂಡ ಬಿಸ್ಲೇರಿ ನೀರು, ಅಗತ್ಯವುಳ್ಳವರಿಗೆ ಔಷಧ ತಲುಪಿಸುವ ಕೆಲಸ ನಿರ್ವಹಿಸುತ್ತಿದ್ದರೂ ಇನ್ನೆಷ್ಟು ದಿನ ಎಂಬ ಪ್ರಶ್ನೆ ಎದುರಾಗಿದೆ.

ಬೈಂದೂರು ತಾಲೂಕಿನ ನಾವುಂದ ಮತ್ತು ನಾಡಾ ಗ್ರಾಮದ ಹತ್ತಾರು ಹಳ್ಳಿಗಳು ಪ್ರತಿ ವರ್ಷವು ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಾ ಬಂದಿವೆ. ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದ್ದು ಇನ್ನಿಲ್ಲದ ಅವಾಂತರ ಸೃಷ್ಟಿಯಾಗಿದೆ. ನೆರೆ ಪ್ರಕೋಪ ತಣಿದಿದ್ದರೂ ನೆಲೆಗೊಂಡ ನೀರು ಇನ್ನೂ ಇಳಿಮುಖ ಆಗುತ್ತಿಲ್ಲ. ತಾಲೂಕು ಆಡಳಿತ, ಸಂಬಂಧಿತ ಎಲ್ಲ ಇಲಾಖೆಗಳು ಕೂಡಲೇ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಬೇಕು. ಭವಿಷ್ಯತ್ತಿನಲ್ಲಿ ಕೃತಕ ನೆರೆ ಆಗದಂತೆ ಶಾಶ್ವತ ಪರಿಹಾರ ಮಾರ್ಗ ಕಂಡುಕೊಳ್ಳಲು ಕ್ರಮ ವಹಿಸಬೇಕು- ನರಸಿಂಹ ದೇವಾಡಿಗ ನಾವುಂದ ಸಮಾಜಸೇವಕ. ಕಳೆದೈದು ದಿನಗಳಿಂದ ಅತೀವ ಸಂಕಷ್ಟ ಎದುರಿಸುತ್ತಿದ್ದೇವೆ. ಪಡುತ್ತಿರುವ ಪಾಡು ಆ ದೇವರೆ ಬಲ್ಲ. ನಮಗೆ ದೇವರೇ ದಿಕ್ಕು. ಆಡಳಿತ ಇದುವರೆಗೂ ಸ್ಪಂದಿಸುವ ಕೆಲಸ ಮಾಡಿಲ್ಲ- ಜಲದಿಗ್ಬಂಧನಕ್ಕೀಡಾದ ಪ್ರದೇಶದ ನಿವಾಸಿಗಳ ಅಳಲು.

- Advertisement -
spot_img

Latest News

error: Content is protected !!