ಪುತ್ತೂರು: ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡಿದ್ದಲ್ಲದೇ ದೇಗುಲವನ್ನು ಅಪವಿತ್ರಗೊಳಿಸಿ ವಿಕೃತಿ ಮೆರೆದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಬೆಳಿಗ್ಗಿನ ಪೂಜೆಗೆ ದೇವಸ್ಥಾನದ ಬಾಗಿಲು ತೆಗೆದ ಸಂದರ್ಭದಲ್ಲಿ ಕಳ್ಳತನ ನಡೆದಿರುವ ವಿಷಯ ಬೆಳಕಿಗೆ ಬಂದಿದೆ. ದೇವಸ್ಥಾನದ ಪ್ರಾಂಗಣದ ಹೆಂಚು ತೆಗೆದು ಒಳ ನುಗ್ಗಿರುವ ಕಳ್ಳರು ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹಕ್ಕೆ ಹಾಕಿದ್ದ ಬೆಳ್ಳಿಯ ಸರ, ಬಂಗಾರದ ಪದಕ ಹಾಗೂ ಬೆಳ್ಳಿಯ ಇತರೆ ಪೂಜಾ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ದೇವಸ್ಥಾನದ ಹೊರಾಂಗಣದಲ್ಲಿರುವ ಕಂಬದ ಮೂಲಕ ದೇವಸ್ಥಾನದ ಒಳಗೆ ಸೇರಿರುವ ಕಳ್ಳರು, ದೇವಸ್ಥಾನದ ತುಂಬೆಲ್ಲಾ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಕಳ್ಳತನ ಆರಂಭಿಸುವ ಮೊದಲು ದೇವಸ್ಥಾನದ ಒಳಗೆ ಯಾರೂ ಬರದಂತೆ ಮುನ್ನೆಚ್ಚರಿಕೆಯಾಗಿ ಹೆಬ್ಬಾಗಿಲಿನ ಮುಂದೆ ಎಣ್ಣೆಯನ್ನು ಚೆಲ್ಲಿದ್ದಾರೆ. ಬೆಳ್ಳಿ ಆಭರಣಗಳ ಜೊತೆಗೆ ದೇವರಿಗೆ ಪ್ರತಿನಿತ್ಯ ಅಭಿಷೇಕ ಮಾಡಲು ಉಪಯೋಗಿಸುವ ಗಂಧದ ಕೊರಡುಗಳನ್ನೂ ಕಳ್ಳರು ದೋಚಿದ್ದಾರೆ. ಕಳ್ಳತನ ನಡೆಸಿ ಹೋಗುವ ಬದಲು ದೇವಸ್ಥಾನವನ್ನು ಅಪವಿತ್ರಗೊಳಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನದ ಗರ್ಭಗುಡಿ ಸೇರಿದಂತೆ ದೇವಸ್ಥಾನದ ಸುತ್ತಲೂ ಉಗುಳಿ ಹೋಗಿ ವಿಕೃತಿ ಮೆರೆದಿದ್ದಾರೆ. ಅಲ್ಲದೆ ದೇವರ ಅಭಿಷೇಕಕ್ಕೆಂದು ತಂದಿರುವ ಸೀಯಾಳಗಳನ್ನು ದೇವಸ್ಥಾನದ ಒಳಗೇ ಕುಡಿದಿರುವುದಲ್ಲದೆ, ಮದ್ಯವನ್ನೂ ಸೇವಿಸಿದ್ದಾರೆ.
ಕಳ್ಳತನ ನಡೆಸಲು ಬರುವ ಕಳ್ಳರು ಮುಖ್ಯವಾಗಿ ಕಳ್ಳತನ ಮಾತ್ರ ಮಾಡಿ ತೆರಳಿದರೆ, ಇವರು ದೇವಸ್ಥಾನವನ್ನು ಅಪವಿತ್ರ ಮಾಡುವ ಉದ್ಧೇಶದಿಂದಲೇ ದೇವಸ್ಥಾನದ ಒಳಗೆ ನುಗ್ಗಿದ್ದಾರೆ ಎನ್ನುವ ಸಂಶಯ ಮೂಡಿವೆ. ಕಳ್ಳತನದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ದೇವಸ್ಥಾನಕ್ಕೆ ನುಗ್ಗುವ ಮೊದಲು ಕಳ್ಳರ ತಂಡ ದೇವಸ್ಥಾನದ ಪಕ್ಕದಲ್ಲೇ ಇರುವ ಮೂರು ಅಂಗಡಿಗಳಲ್ಲೂ ಕಳ್ಳತನ ನಡೆಸಿದೆ.


