ಬೆಳ್ತಂಗಡಿ : ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಆಹಾರ ನಿರೀಕ್ಷಕರು ಜಂಟಿಯಾಗಿ ಸಿಬ್ಬಂದಿಗಳ ಜೊತೆ ದಾಳಿ ಮಾಡಿ ಅಕ್ರಮ ದಾಸ್ತಾನು ವಶಪಡಿಸಿಕೊಂಡ ಘಟನೆ ಪಣಕಜೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಸದಾಶಿವ ಸ್ಟೋರಿ ಸೇರಿದ ಗೋವಿಂದ ಸದನದ ಮನೆಯ ಪಕ್ಕದಲ್ಲಿರುವ ಗೋಡೌನ್ ಮೇಲೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಮತ್ತು ಆಹಾರ ನಿರೀಕ್ಷಕ ವಿಶ್ವ.ಕೆ ಹಾಗೂ ಸಿಬ್ಬಂದಿಗಳು ಇಂದು ಮಧ್ಯಾಹ್ನ ದಾಳಿ ಮಾಡಿದ್ದಾರೆ. ದಾಳಿ ವೇಳೆ ಗೋಡೌನ್ ನಲ್ಲಿ 14.5 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು ಅಶೋಕ್ ಲೆಲೈಂಡ್ ಗೂಡ್ಸ್ ವಾಹನದಲ್ಲಿ ತುಂಬಿಸಿಟ್ಟ 23 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು ಅಧಿಕಾರಿಗಳು ಅಕ್ರಮ ದಾಸ್ತಾನನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೂ ಅಕ್ರಮ ದಾಸ್ತಾನು ಶೇಖರಿಸಿಟ್ಟ ಮನೆಯ ಗೋಡೌನ್ ಮತ್ತು ಅಂಗಡಿಯು ಮಾಲೀಕ ಸದಾಶಿವ ಶೆಣೈ ಗೆ ಸೇರಿದ್ದು ಅವರ ವಿನಾಯಕ ರೈಸ್ ಮಿಲ್ ನಲ್ಲಿ ಕೆಲಸಕ್ಕೆ ಇರುವ ವ್ಯಕ್ತಿಯೊಬ್ಬರಿಗೆ ಬಾಡಿಗೆ ನೀಡಿದ್ದಾರೆ ಎಂದು ತನಿಖೆಯಲ್ಲಿ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಆಹಾರ ನಿರೀಕ್ಷಕ ವಿಶ್ವ.ಕೆ ದೂರು ನೀಡಿದ್ದಾರೆ.
ಅಕ್ರಮ ಪಡಿತರ ಅಕ್ಕಿ ದಾಸ್ತಾನು ಸ್ಥಳಕ್ಕೆ ಆಗಮಿಸಿದ ತಂಡದ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಆಹಾರ ನಿರೀಕ್ಷಕ ವಿಶ್ವ.ಕೆ, ಕಂದಾಯ ನಿರೀಕ್ಷಕ ಪ್ರತೀಷ್, ಗ್ರಾಮಸಹಾಯಕ ಗುಣಾಕರ ಹೆಗ್ಡೆ, ಅಭಿಲಾಷ್ , ಚಾಲಕ ಸಂತೋಷ್ ಕುಮಾರ್, ಪುಂಜಾಲಕಟ್ಟೆ ಪಿಎಸ್ಐ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.


