
ಮಂಗಳೂರು: 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿ, ನಾಲ್ಕು ದಶಕಗಳ ಕಾಲ ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ್ದ ಐತಿಹಾಸಿಕ ‘ಟಿ-55’ ಯುದ್ಧ ಟ್ಯಾಂಕ್ ಅನ್ನು ಮಂಗಳೂರು ನಗರದ ಕದ್ರಿಯ ಯುದ್ಧ ಸ್ಮಾರಕದ ಬಳಿ ಇಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಇದು ಕೇವಲ ಕಬ್ಬಿಣದ ಯಂತ್ರ ಅಥವಾ ಪ್ರದರ್ಶನದ ವಸ್ತುವಲ್ಲ, ಬದಲಿಗೆ ಅಸಂಖ್ಯಾತ ಯೋಧರ ಸಾಹಸದ ಜೀವಂತ ಸಾಕ್ಷಿಯಾಗಿದ್ದು, ದೇವಸ್ಥಾನಕ್ಕೆ ನೀಡುವಷ್ಟೇ ಗೌರವವನ್ನು ಇದಕ್ಕೆ ನೀಡಬೇಕು ಎಂದು ಹೇಳಿದರು.
ಗಡಿಯಲ್ಲಿ 21 ಸಾವಿರ ಅಡಿ ಎತ್ತರದಲ್ಲಿ 25 ಕೆಜಿ ಶಸ್ತ್ರಾಸ್ತ್ರಗಳನ್ನು ಹೊತ್ತು ಕಾಯುವ ಯೋಧರು ತಮ್ಮ ಎದೆಗೆ ಗುಂಡು ತಡೆದುಕೊಳ್ಳುತ್ತಿರುವುದರಿಂದಲೇ ನಾವಿಂದು ಶಾಂತಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದ ಅವರು, ಮುಂದಿನ ದಿನಗಳಲ್ಲಿ ಕದ್ರಿ ಸ್ಮಾರಕಕ್ಕೆ ಹಳೆಯ ‘ಮಿಗ್-21’ ಯುದ್ಧ ವಿಮಾನವನ್ನು ತಂದು ಇರಿಸುವ ಹಾಗೂ ಪ್ರತಿಯೊಬ್ಬ ನಾಗರಿಕನೂ ಬಂದು ಯೋಧರಿಗೆ ಗೌರವ ಸಲ್ಲಿಸುವಂತಹ ಪ್ರೇರಣಾ ಸ್ಥಳವಾಗಿ ಇದನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದು ತಿಳಿಸಿದರು.


