
ಬಂಟ್ವಾಳ: ಕಳೆದ ಬುಧವಾರ ನಗರದ ಹೊರವಲಯದ ಅಪಾರ್ಟ್ ಮೆಂಟ್ ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ತುಳು ನಟ ಮತ್ತು ರೌಡಿ ಶೀಟರ್ ಸುರೇಂದ್ರ ಬಂಟ್ವಾಳ್ ಅವರ ಹತ್ಯೆ ಪ್ರಕರಣಕ್ಕೆ ಈಗ ಹೊಸ ಆಯಾಮವೊಂದು ಸೇರ್ಪಡೆಗೊಂಡಿದೆ. ಮೃತ ಸುರೇಂದ್ರರ ಬಳಿ ಇದ್ದ ಸುಮಾರು ಒಂದು ಕೋಟಿ ರೂ. ಹಣ ದೋಚುವುದಕ್ಕಾಗಿ ಈ ಕೊಲೆ ಮಾಡಲಾಗಿದೆ ಎಂದು ತಾಯಿ ಮತ್ತು ಸಹೋದರ ಆರೋಪಿಸುತ್ತಿದ್ದಾರೆ.
ಭಂಡರಿಬೆಟ್ಟು ಫ್ಲ್ಯಾಟ್‌ನಲ್ಲಿ ಸುರೇಂದ್ರ ಅವರ ಬಳಿ ಒಂದು ಕೋಟಿ ರೂಪಾಯಿ ನಗದು ಇತ್ತು ಮತ್ತು ಅವರ ದೇಹದ ಮೇಲೆ ಸುಮಾರು ಒಂದು ಕಿಲೋಗ್ರಾಂ ಚಿನ್ನದ ಆಭರಣಗಳಿದ್ದು ಹಾಗಾಗಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ಸುರೇಂದ್ರನ ತಾಯಿ ರಾಧಾ ಮತ್ತು ಮಂಗಳೂರಿನಲ್ಲಿರುವ ಸುರೇಂದ್ರ ಸಹೋದರ ಚಂದ್ರಹಾಸ್ ಆರೋಪಿಸಿದ್ದಾರೆ.
ಕೊಲೆಯ ನಂತರ ಆರೋಪಿಗಳು ನಗದು ಮತ್ತು ಚಿನ್ನದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. “ಈ ವಿಷಯವನ್ನು ನಾವು ಪೊಲೀಸರಿಗೆ ತಿಳಿಸಿದ ನಂತರವೂ ಅವರು ನಮ್ಮ ದೂರನ್ನು ಸ್ವೀಕರಿಸಲು ಸಿದ್ಧರಿಲ್ಲ. ಆದ್ದರಿಂದ ನಾವು ನಗದು ಮತ್ತು ಆಭರಣಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇವೆ ಎಂದಿದ್ದಾರೆ.
ಇನ್ನು ತಮ್ಮ ಮನೆಯಲ್ಲಿ ಊಟ ಮಾಡಿ ಬೆಳೆದ ಸತೀಶ್ ಕುಲಾಲ್, ನನ್ನ ಮಗನನ್ನು ಕೊಂದಿದ್ದಾನೆ. ಇದರ ಹಿಂದೆ ಸತೀಶ್ ಮಾತ್ರವಲ್ಲ, ಕಾಣದ ಹಲವಾರು ಕೈಗಳು ಕೆಲಸ ಮಾಡಿವೆ ಎಂದು ತಾಯಿ ರಾಧಾ ಆರೋಪಿಸಿದ್ದಾರೆ. ಮೂರು ದಿನಗಳ ಹಿಂದೆಯೇ ತನ್ನ ಮಗ ತನ್ನ ಫ್ಲ್ಯಾಟ್‌ನಲ್ಲಿದ್ದ ಹಣದ ಬಗ್ಗೆ ಹೇಳಿದ್ದಾಗಿ ರಾಧಾ ಹೇಳಿದ್ದಾರೆ.


