ಮಂಡ್ಯ: ಕೊರೋನಾ ಶಂಕಿತ ವ್ಯಕ್ತಿಗೆ ಕ್ವಾರಂಟೈನ್ ಮಾಡುವ ವಿಚಾರಕ್ಕೆ ಮನನೊಂದು ಜಿಲ್ಲೆಯ ಆಶಾ ಕಾರ್ಯಕರ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಇತ್ತೀಚೆಗೆ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಮೈಸೂರಿನ ಖಾಸಗಿ ನರ್ಸಿಂಗ್ ಹೋಂನಲ್ಲಿ ಸೋಂಕು ಪತ್ತೆಯಾಗಿದ್ದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಹೋಗಿದ್ದ ಎಲ್ಲರನ್ನೂ ಕ್ವಾರಂಟೈನ್ ನಲ್ಲಿ ಇಡಲು ಸೂಚನೆ ನೀಡಲಾಗಿದೆ.
ಹೋಮ್ ಕ್ವಾರಂಟೈನ್ ನಲ್ಲಿಡುವಂತೆ ಸೂಚನೆ ನೀಡಲಾಗಿದ್ದು ಆಸ್ಪತ್ರೆಗೆ ತೆರಳಿದ ಗ್ರಾಮದ ವ್ಯಕ್ತಿಯ ಮಾಹಿತಿಯನ್ನು ಆಶಾ ಕಾರ್ಯಕರ್ತೆಗೆ ಗ್ರಾಮ ಪಂಚಾಯಿತಿಯ ಸಿಬ್ಬಂದಿ ನೀಡಿದ್ದಾರೆ. ಈ ಮಾಹಿತಿ ಅನ್ವಯ ವ್ಯಕ್ತಿಯನ್ನು ಕ್ವಾರಂಟೈನ್ ಮಾಡಲು ಆಶಾ ಕಾರ್ಯಕರ್ತೆ ಗ್ರಾಮಕ್ಕೆ ತೆರಳಿದ್ದ ವೇಳೆ ನಿಮಗೆ ಮಾಹಿತಿ ನೀಡಿದ್ದು ಯಾರು ಎಂದು ಶಂಕಿತ ಕೇಳಿದ್ದಾನೆ.
ಗ್ರಾಮ ಪಂಚಾಯತಿ ಸಿಬ್ಬಂದಿ ಮಾಹಿತಿ ನೀಡಿರುವುದಾಗಿ ಆಶಾ ಕಾರ್ಯಕರ್ತೆ ಹೇಳಿದ್ದು ಇದರಿಂದ ಕೋಪಗೊಂಡ ಶಂಕಿತ ವ್ಯಕ್ತಿ ಗ್ರಾಮ ಪಂಚಾಯತಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾನೆ. ಮಾಹಿತಿ ಬಹಿರಂಗ ಪಡಿಸಿದ್ದು ಏಕೆ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ಬೈದಾಡಿದ್ದರಿಂದ ಆಶಾ ಕಾರ್ಯಕರ್ತೆ ತಮ್ಮ ಬಳಿ ಇದ್ದ ಕೆಲವು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ.