
ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ ಹೋಂಡಾ ಶೈನ್ ಬೈಕ್‌ನ್ನು ಪೊಲೀಸರು ಪತ್ತೆಹಚ್ಚಿದ್ದು, ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಆರ್‌ಎಸ್‌ಬಿ ಸಭಾಭವನದ ಸಮೀಪದ ವೇಘಾ ಟ್ರಾನ್ಸ್‌ಪೋರ್ಟ್ಸ್ ಬಳಿಯ ಶೆಡ್‌ನಲ್ಲಿ KA 20 EU 3431 ನೋಂದಣಿ ಸಂಖ್ಯೆಯ ಹೋಂಡಾ ಶೈನ್ ಬೈಕ್‌ನ್ನು ಅಕ್ಟೋಬರ್ 20ರಂದು ಬೆಳಿಗ್ಗೆ 9.30ಕ್ಕೆ ಅದರ ಮಾಲೀಕರು ನಿಲ್ಲಿಸಿ ಹುಬ್ಬಳ್ಳಿಗೆ ತೆರಳಿದ್ದರು. ಅಕ್ಟೋಬರ್ 22ರಂದು ರಾತ್ರಿ 9 ಗಂಟೆಗೆ ವಾಪಸ್ ಬಂದಾಗ ಬೈಕ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.
ನವೆಂಬರ್ 18ರಂದು ಮಣಿಪಾಲ ಪೊಲೀಸರು ಶಿವಳ್ಳಿ ಗ್ರಾಮದ ಮಣ್ಣಪಳ್ಳ ಕೆರೆ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬನನ್ನು ತಡೆದು ವಿಚಾರಣೆ ನಡೆಸಿದರು. ಈ ವೇಳೆ ಆತ ಬೆಂಗಳೂರಿನ ಮಾರೆನಹಳ್ಳಿ ನಿವಾಸಿ ಮನೀಶ್ ಎ. ಎಂಬುದು ತಿಳಿದುಬಂದಿದೆ.
ಪೊಲೀಸರು ಪರಿಶೀಲಿಸಿದಾಗ ಆತ ಚಲಾಯಿಸುತ್ತಿದ್ದ ಬೈಕ್ ಕಳವಾಗಿದ್ದ ಹೋಂಡಾ ಶೈನ್ ಎಂಬುದು ದೃಢಪಟ್ಟಿದೆ. ವಿಚಾರಣೆ ವೇಳೆ ಬೈಕ್ ಕಳವು ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದು, ಆತನನ್ನು ಬಂಧಿಸಿ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಉಪವಿಭಾಗದ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ಅವರ ನಿರ್ದೇಶನದಲ್ಲಿ, ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಮತ್ತು ಪಿಎಸ್‌ಐ ಶಂಭುಲಿಂಗಯ್ಯ ಎಂ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಎಎಸ್‌ಐ ವಿವೇಕಾನಂದ, ಹೆಡ್‌ಕಾನ್‌ಸ್ಟೆಬಲ್ ಮಹಮ್ಮದ್ ಅಜ್ಮಲ್ ಹಾಗೂ ಕಾನ್‌ಸ್ಟೆಬಲ್ ಮಂಜುನಾಥ ಎಂ.ಆರ್. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


