Friday, May 3, 2024
Homeಕರಾವಳಿಬೆಳ್ತಂಗಡಿಯಲ್ಲಿ ಸಂವಿಧಾನದ ಹಕ್ಕುಗಳ ಸಂರಕ್ಷಣೆಗಾಗಿ ವಿಶೇಷ ಕಾರ್ಯಕ್ರಮ

ಬೆಳ್ತಂಗಡಿಯಲ್ಲಿ ಸಂವಿಧಾನದ ಹಕ್ಕುಗಳ ಸಂರಕ್ಷಣೆಗಾಗಿ ವಿಶೇಷ ಕಾರ್ಯಕ್ರಮ

spot_img
- Advertisement -
- Advertisement -

ಬೆಳ್ತಂಗಡಿ; ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಸಂವಿಧಾನದ ಹಕ್ಕುಗಳ ಸಂರಕ್ಷಣೆಗಾಗಿ ವಿಶೇಷ ಕಾರ್ಯಕ್ರಮವನ್ನು ಬೆಳ್ತಂಗಡಿಯಲ್ಲಿ ಸಮಾನಮನಸ್ಕರ ವೇದಿಕೆ ಹೆಸರಿನಲ್ಲಿ ನಡೆಸಲಾಯಿತು.

“ನನ್ನ ಆಹಾರ ನನ್ನ ಹಕ್ಕು” ಎಂಬ ಘೋಷಣೆಯಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ, ಅಂಬೇಡ್ಕರ್ ವಾದಿ ಧಮ್ಮಾನಂದ ಬಿ ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ನಮ್ಮೆಲ್ಲರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರಸ್ತುತ ನಾವು ಅತ್ಯಂತ ವಿಷಮ ಸ್ಥಿತಿಯಲ್ಲಿ ಬದುಕುವಂತಾಗಿರುವುದು ನಮ್ಮ ದೇಶದ ದುರಂತ. ಸಂವಿಧಾನದ ಪರಿಚ್ಛೇದ 21 ರಲ್ಲಿ ನಮ್ಮ ಆಹಾರದ ಹಕ್ಕುಗಳ ಬಗ್ಗೆ ಸ್ಪಷ್ಟಪಡಿಸಿದ್ದರೂ ಸಂಘಪರಿವಾರ ಜನರ ಆಹಾರದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುವ ಮೂಲಕ ದೌರ್ಜನ್ಯ ನಡೆಸುತ್ತಿದೆ. ನಾವು ಏನು ತಿನ್ನಬೇಕು ಎನ್ನುವುದು ನಮ್ಮ ತೀರ್ಮಾನ. ಅದನ್ನು ಪ್ರಶ್ನಿಸುವ ಹಕ್ಕು ಸಂಘಪರಿವಾರಕ್ಕೆ ಕೊಟ್ಟವರಾರು ಎಂದು ಪ್ರಶ್ನಿಸಿದ ಅವರು ದೇಶದ ಸ್ವಾತಂತ್ರ್ಯವೆಂದರೆ ಜನರ ಮೂಲಭೂತ ಹಕ್ಕುಗಳು ಹಾಗಾಗಿ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನಾವು ಸಂಘಟಿತ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ ಎಂದರು.

ಸಾಮಾಜಿಕ ಹೋರಾಟಗಾರ , ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಈ ಸಂದರ್ಭದಲ್ಲಿ ನಮ್ಮ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ನಾವು ಧ್ವನಿ ಎತ್ತುತ್ತಿರುವುದು ದುರಂತ. ರಾಜಸ್ಥಾನದಲ್ಲಿ ದಲಿತ ಬಾಲಕ ನೀರಿನ ಪಾತ್ರೆ ಮುಟ್ಟಿದ ಎಂಬ ಕಾರಣಕ್ಕಾಗಿ ಕೊಲೆ ನಡೆದಿರುವಾಗ ಸ್ವಾತಂತ್ರ್ಯ ಅಮೃತಮಹೋತ್ಸವಕ್ಕೆ ಯಾವ ಅರ್ಥವಿದೆ ಪ್ರಶ್ನಿಸಿದ ಅವರು ಗೋವಿನ ಹೆಸರಿನಲ್ಲಿ ಅನೈತಿಕ ಪೋಲಿಸ್ ಗಿರಿ ನಡೆಸುವ ಸಂಘಪರಿವಾರ , ಬಿಜೆಪಿ ಕಾರ್ಯಕರ್ತರೇ ಇಂದು ಅಕ್ರಮ ಗೋಸಾಗಟದಲ್ಲಿ ನೇರವಾಗಿ ಭಾಗಿಯಾಗುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶವು ಗೋಮಾಂಸ ರಪ್ತಿನಲ್ಲಿ ಜಗತ್ತಿನಲ್ಲಿ ನಂ 1 ಆಗಿದೆ. ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಸೇರಿದಂತೆ ಸಂಘಪರಿವಾರದ ನಾಯಕರೆ ಗೋಮಾಂಸ ರಪ್ತು ಕಂಪನಿಯ ಮಾಲೀಕರಾಗಿದ್ದರೂ ನಮ್ಮ ದೇಶದ ಮೂಲನಿವಾಸಿಗಳ ಆಹಾರ ಪದ್ಧತಿಯ ಮೇಲೆ ದಾಳಿ ನಡೆಸುವ ಸರ್ಕಾರದ ವಿರುದ್ಧ ನಾವು ಸಿಡಿದೇಳಬೇಕಾಗಿದೆ. ಸಂಘಪರಿವಾರದವರಿಗೆ ಹಣ ಮಾಡಲು ಗೋವುಗಳು ಬೇಕಾದರೆ ನಮಗೆ ತಿನ್ನುವ ಆಹಾರಕ್ಕಾಗಿಯೂ ಗೋಮಾಂಸ ಅಗತ್ಯವಿದೆ ಎಂದು ಹೇಳಬೇಕಾಗಿದೆ ಎಂದರು.

ಖ್ಯಾತ ಯುವ ನ್ಯಾಯವಾದಿ ಅಬಿನ್ ಫ್ರಾನ್ಸಿಸ್ ಮಾತನಾಡುತ್ತಾ ನಮ್ಮ ಹಕ್ಕುಗಳ ಬಗ್ಗೆ ಮಾತನಾಡದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು ನಮ್ಮ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಪಣ ತೊಡುವ ಮೂಲಕ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬರಹಗಾರ ಶಫಿ ಬಂಗಾಡಿ , ಪ್ರಮುಖರಾದ ಖಾದರ್ ನಾವೂರು , ಮಂಜುನಾಥ್ ಲಾಯಿಲ , ರಮೀಝ್ ಬೆಳ್ತಂಗಡಿ , ಜಯರಾಂ ಮಯ್ಯ ಕೊಯ್ಯೂರು , ಹರೀಶ್ ಎಲ್ , ರಾಮಚಂದ್ರ ಧರ್ಮಸ್ಥಳ , ನೆಬಿಸಾ ಬೆಳ್ತಂಗಡಿ , ಹರೀಶ್ ಕುಮಾರ್ ಎಲ್ , ಸಂದೇಶ್ ಎಲ್ , ಕೃಷ್ಣ ಎಲ್ , ವಿನುಶು ರಮಣ ಪಟ್ರಮೆ , ಜೋಶಿಲ್ ಫರ್ನಾಂಡೀಸ್, ಮುಸ್ತಫಾ ಲಾಯಿಲ,ಉಮ್ಮರ್ ಲಾಯಿಲ, ಲಾರೆನ್ಸ್ ಕೈಕಂಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಗೋಮಾಂಸದ ಬಿರಿಯಾನಿ ಸೇವಿಸುವ ಮೂಲಕ ಸಂವಿಧಾನಿಕ ಹಕ್ಕುಗಳೊಂದಾದ ನನ್ನ ಆಹಾರ ನನ್ನ ಹಕ್ಕು ಎಂಬುದನ್ನು ಎತ್ತಿ ಹಿಡಿಯಲಾಯಿತು.

- Advertisement -
spot_img

Latest News

error: Content is protected !!