ಮಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳೆಯರು 75 ಕೋಟಿ ರೂ. ಮಾಲ್ಯದ ಎಂಡಿಎಂಎ ಡ್ರಗ್ಸ್ ಸಹಿತವಾಗಿ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದು, ಇದೀಗ ಆರೋಪಿಗಳಿಬ್ಬರು ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನಲಾಗುತ್ತಿದೆ.
ದಕ್ಷಿಣ ಆಫ್ರಿಕಾದ ಪ್ರಜೆಗಳಾದ ಬಂಬಾ ಫಾಂಟಾ ಆಲಿಯಾಸ್ ಅಡೊನಿಸ್ ಜಬುಲೈಲ್ (31) ಮತ್ತು ಒಲಿಜೊ ಇವನ್ಸ್ ಆಲಿಯಾಸ್ ಅಬಿಗೈಲ್ ಅಡೊನಿಸ್ (30) ಬಂಧಿತ ಆರೊಪಿಗಳಾಗಿದ್ದು, ಇವರಿಬ್ಬರ ಪೊಲೀಸ್ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಿದ್ದು, ಇದೀಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆದರೆ ಕಾರಗೃಹದಲ್ಲಿರುವ ಅವರಿಬ್ಬರು ವಿಚಾರಣೆಗೆ ಸಹಕರಿಸದೇ ಇರುವ ಕಾರಣದಿಂದಾಗಿ ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಲಭ್ಯವಿರುವ ತಾಂತ್ರಿಕ ಪುರಾವೆಗಳ ವಿಶ್ಲೇಷಣೆಗಳ ಮೂಲಕವೇ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ನವದೆಹಲಿಗೆ ತೆರಳಿ ಈ ಪ್ರಕರಣದ ಮಹಜರು ಹಾಗೂ ಕಾನೂನು ಸಂಬಂಧಿಸಿದ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಮೇಲ್ನೋಟಕ್ಕೆ ಆರೋಪಿಗಳಿಬ್ಬರು ಕೆಲವು ಸಮಯದ ಕಾಲ ಡ್ರಗ್ಸ್ ಚಟುವಟಿಕೆಗಳನ್ನು ನಿಲ್ಲಿಸಿದಂತೆ ಕಾಣುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.