Thursday, May 16, 2024
Homeಕರಾವಳಿಉಡುಪಿವಿಶ್ವ ಕೌಶಲ್ಯಾಭಿವೃದ್ಧಿ ದಿನಕ್ಕೆ ರಾಜ್ಯ ಸರ್ಕಾರದ ಕೊಡುಗೆ: ಸ್ಕಿಲ್ ಕನೆಕ್ಟ್ ಪರಿಷ್ಕೃತ ಪೋರ್ಟಲ್ ಜುಲೈ 15ರಂದು...

ವಿಶ್ವ ಕೌಶಲ್ಯಾಭಿವೃದ್ಧಿ ದಿನಕ್ಕೆ ರಾಜ್ಯ ಸರ್ಕಾರದ ಕೊಡುಗೆ: ಸ್ಕಿಲ್ ಕನೆಕ್ಟ್ ಪರಿಷ್ಕೃತ ಪೋರ್ಟಲ್ ಜುಲೈ 15ರಂದು ಲೋಕಾರ್ಪಣೆ:  ಕುಂದಾಪುರದಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿಕೆ

spot_img
- Advertisement -
- Advertisement -

ಕುಂದಾಪುರ: ಹೆಚ್ಚು ಪರಿಣಾಮಕಾರಿಯಾಗುವಂತೆ ರೂಪಿಸಲಾಗಿರುವ ಕೌಶಲಾಭಿವೃದ್ಧಿ ಇಲಾಖೆಯ ಪರಿಷ್ಕೃತ ಸ್ಕಿಲ್ ಕನೆಕ್ಟ್ ಪೋರ್ಟಲ್ ಅನ್ನು ವಿಶ್ವ ಯುವಜನ ಕೌಶಲಾಭಿವೃದ್ಧಿ ದಿನವಾದ ಜುಲೈ 15ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಕೌಶಲಾಭಿವೃದ್ಧಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರನ್ನು ಒಂದೇ ವೇದಿಕೆಯಡಿ ತರಲು ಈ ಪೋರ್ಟಲ್ ತುಂಬಾ ಅನುಕೂಲಕರವಾಗಿದೆ ಎಂದರು.

ಈ ಪೋರ್ಟಲ್ ಮೂಲಕ ಉದ್ಯೋಗ ಸಂಬಂಧಿ ಅವಕಾಶಗಳನ್ನು ತಿಳಿದು ಮೌಲ್ಯಮಾಪನ ಮಾಡಿ ಕೌಶಲಗಳ ಕೊರತೆ ಬಗ್ಗೆ ವಿವರಗಳನ್ನು ತಿಳಿಯಲು ಅವಕಾಶ ಮಾಡಿಕೊಡುತ್ತಿದೆ. ಇದರಿಂದಾಗಿ, ಉದ್ಯಮಗಳ ಮಾನವ ಸಂಪನ್ಮೂಲ ಕೊರತೆಯನ್ನು ತುಂಬಲು ಪೋರ್ಟಲ್ ಸಹಕಾರಿಯಾಗಲಿದೆ. ಇಲಾಖೆಯ ಈ ಪೋರ್ಟಲ್ ಮುಂಚೆ ಕೂಡ ಇತ್ತು. ಈಗ ಇದನ್ನು ಹೆಚ್ಚು ಪರಿಣಾಮಕಾರಿಯಾಗುವಂತೆ ಪರಿಷ್ಕೃತಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

ವಿದ್ಯಾರ್ಥಿಗಳಿಗೆ ಕೌಶಲಗಳ ತರಬೇತಿ ನೀಡುವ ಸಲುವಾಗಿ ಸರ್ಕಾರವು ಕಂಪನಿಗಳ ಜೊತೆ ಕೈಜೋಡಿಸಿದೆ. ಉದ್ಯಮಗಳ ಬೇಡಿಕೆಯೇ ಬೇರೆ, ನಾವು ಸೃಷ್ಟಿಸುತ್ತಿರುವ ವಿದ್ಯಾರ್ಥಿಗಳ ಕೌಶಲಗಳೇ ಬೇರೆ ಎನ್ನುವ ಪರಿಸ್ಥಿತಿ ಇರಬಾರದು. ಉದ್ಯೋಗಾವಕಾಶಗಳು ಹಾಗೂ ಎಂತಹ ಉದ್ಯೋಗಗಳಿಗೆ ಬೇಡಿಕೆ ಇದೆ ಎಂಬ ಸಮರ್ಪಕ ಮಾಹಿತಿ ಸಿಗುವಂತೆ ಮಾಡಲಾಗುವುದು. ಉದ್ಯೋಗಾಕಾಂಕ್ಷಿಗಳಿಗೆ ಕನಸಿನ ಉದ್ಯೋಗ ದೊರಕಿಸುವುದಕ್ಕಾಗಿ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಂಡು ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಡಿ ತಾಂತ್ರಿಕತೆಯ ಜ್ಞಾನಶಾಖೆಗಳಾದ ಡಾಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ ಇವುಗಳ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ನ್ಯಾಸ್ಕಾಂ ಜೊತೆ ಒಪ್ಪಂದ ಮಾಡಿಕೊಂಡಿರುವ ಮೊದಲ ರಾಜ್ಯ ಕರ್ನಾಟಕ. ಹಾಗೆಯೇ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದರಲ್ಲಿ 5000 ಆಡ್ ಆನ್ ಕೋರ್ಸ್ ಗಳಿವೆ. ಸರ್ಕಾರಿ ಕಾಲೇಜುಗಳಿಗೆ ಐಟಿ ಸಂಸ್ಥೆಗಳಿಂದ 27,000 ಕಂಪ್ಯೂಟರ್ ಗಳನ್ನು ಕೊಡಿಸಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ರಾಜ್ಯದಲ್ಲಿ 1200 ಐಟಿಐ ಸಂಸ್ಥೆಗಳಿವೆ. ಇದರಲ್ಲಿ ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ದೀರ್ಘಾವಧಿ ಕೋರ್ಸ್ ಗಳನ್ನು ಕಲಿಯಲು ಹಾಗೂ ಒಂದು  ಲಕ್ಷ ವಿದ್ಯಾರ್ಥಿಗಳಿಗೆ ಅಲ್ಪಾವಧಿ ಕೋರ್ಸ್ಗಳನ್ನು ಕಲಿಯಲು ಅವಕಾಶ ಇದೆ. ಪಾಲಿಟೆಕ್ನಿಕ್ನಲ್ಲಿ ಮುಂಚೆ 30,000 ಇದ್ದ ಪ್ರವೇಶಾತಿ ಈಗ 75,000 ಕ್ಕೆ ಹೆಚ್ಚಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲೂ ಜಿಟಿಟಿಸಿ ಕೇಂದ್ರಗಳಿವೆ. ವೈದ್ಯಕೀಯ ಕಾಲೇಜು ಒಂದನ್ನು ಬಿಟ್ಟು ರಾಜ್ಯದಲ್ಲಿ ಬೇರೆ ಯಾವುದೇ ಕೋರ್ಸ್ ಗೆ ಸೀಟಿನ ಕೊರತೆ ಇಲ್ಲ ಎಂದು ತಿಳಿಸಿದರು.

ಇದೇ ವೇಳೆ, ರಾಜಕೀಯ ನಾಯಕರಾಗಿದ್ದ ದಿವಂಗತ ವಿ.ಎಸ್.ಆಚಾರ್ಯ ಅವರನ್ನು ನೆನೆದು, ಅವರ ನಡೆ-ನುಡಿ ತನಗೆ ಸದಾ ಸ್ಫೂರ್ತಿ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!