ಮಂಗಳೂರು; ಉಳ್ಳಾಲದಲ್ಲಿ ಲಕೋಟೆಯೊಂದರಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿವೆ. ಉಳ್ಳಾಲ ಪರಿಸರದ ಕುಂಪಲ ಚಿತ್ರಾಂಜಲಿ ನಗರದಲ್ಲಿ ಶನಿವಾರ ರಾತ್ರಿ ಲಕೋಟೆಯೊಂದರಲ್ಲಿ ಸಂಸ್ಕರಿಸಿಟ್ಟ ಮಾನವ ಅಸ್ಥಿಗಳು ಪತ್ತೆಯಾಗಿವೆ.
ಕಳೆದ ವಾರ ಚಿತ್ರಾಂಜಲಿ ನಗರದಲ್ಲಿ ಸ್ಥಳೀಯ ಸಂಘಟನೆಯೊಂದರ ವಾರ್ಷಿಕೋತ್ಸವ ನಡೆದಿತ್ತು. ವಾರ್ಷಿಕೋತ್ಸವದ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಯುವಕನೋರ್ವನ ಬಾಡಿಗೆ ಕಾಸ್ಟೋಮ್ ಈ ಪ್ರದೇಶದಲ್ಲೇ ಕಳೆದು ಹೋಗಿತ್ತು. ನಿನ್ನೆ ರಾತ್ರಿ ಯುವಕನು ಅದನ್ನು ಡುಕಲು ಬಂದಾಗ ಅಸ್ಥಿಗಳ ಲಕೋಟೆ ದೊರೆತಿದೆ. ಅಸ್ಥಿಗಳನ್ನ ಕಂಡು ಹೌಹಾರಿದ ಯುವಕ ಊರೆಲ್ಲಾ ಸುದ್ದಿ ಹಬ್ಬಿಸಿದ್ದು, ಸ್ಥಳದಲ್ಲಿ ಜನ ಜಮಾಯಿಸಿದ್ದರು.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉಳ್ಳಾಲ ಪೊಲೀಸರು ಅಸ್ಥಿಗಳು ತುಂಬಿದ್ದ ಲಕೋಟೆಯನ್ನ ವಶಕ್ಕೆ ಪಡೆದಿದ್ದರು. ಬಳಿಕ ಚಿತ್ರಾಂಜಲಿ ನಗರದಲ್ಲಿ ದೊರೆತ ಅಸ್ಥಿಗಳನ್ನ ಸ್ಥಳೀಯ ಮಹಿಳೆಯೇ ತನ್ನ ಮನೆಯ ಆವರಣದ ಬಳಿ ಎಸೆದಿರುವ ವಿಚಾರ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಮಹಿಳೆಯು ಮಂಗಳೂರಿನ ವೈದ್ಯರೋರ್ವರ ಮನೆಯಲ್ಲಿ ಕೆಲಸಕ್ಕಿದ್ದು, ನಿವೃತ್ತಿ ಹೊಂದಿದ್ದ ವೈದ್ಯರು ಮನೆ ಬಿಟ್ಟು ಹೋದಾಗ ಮನೆಯಲ್ಲಿದ್ದ ಕೆಲ ಸಾಮಾಗ್ರಿಗಳನ್ನ ಮಹಿಳೆಯು ತಂದಿದ್ದರೆನ್ನಲಾಗಿದೆ. ವೈದ್ಯರ ಮನೆಯಿಂದ ತಂದಿದ್ದ ಸಂಸ್ಕರಿಸಿಡಲಾದ ಅಸ್ಥಿಗಳ ಲಕೋಟೆಯನ್ನ ಮಹಿಳೆಯು ತನ್ನ ಮನೆಯ ಕಂಪೌಡ್ ಬಳಿ ಎಸೆದಿದ್ದರೆನ್ನಲಾಗಿದೆ.